ಚಿಕ್ಕಮಗಳೂರು: ಕಾಡು ಕುರಿ ನುಂಗಿ ಕಾಫಿ ಗಿಡದ ಬುಡದಲ್ಲಿ ಮಲಗಿ ಸುಧಾರಿಸಿಕೊಳ್ಳುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ವಗಳೆ ನಾಗರಾಜ್ ಅವರ ಎಸ್ವೇಟ್ನಲ್ಲಿ ಸೆರೆ ಹಿಡಿಯಲಾಗಿದೆ.
ನಾಗರಾಜ್ ಅವರು ತೋಟಕ್ಕೆ ಹೋಗುವ ಸಂದರ್ಭದಲ್ಲಿ ಈ ಬೃಹತ್ ಗಾತ್ರದ ಹೆಬ್ಬಾವು ಕಾಫೀ ಗಿಡದ ಬುಡದಲ್ಲಿ ಅತ್ತ ಹೋಗಲು ಆಗದೇ, ಇತ್ತ ಬರಲು ಆಗದೇ ಓದ್ದಾಡುತ್ತಿತ್ತು. ಇದನ್ನು ಗಮನಿಸಿದ ನಾಗರಾಜ್ ಅವರು ಕೂಡಲೇ ಅರಣ್ಯ ಅಧಿಕಾರಿಗಳು ಹಾಗೂ ಉರಗ ತಜ್ಞ ಹರೀಂದ್ರ ಅವರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಹರೀಂದ್ರ ಸತತ ಒಂದು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಹೆಬ್ಬಾವನ್ನ ಸೆರೆ ಹಿಡಿದಿದ್ದಾರೆ.
ಹೆಬ್ಬಾವು ಬರೋಬ್ಬರೀ 75 ಕೆ.ಜಿ. ಭಾರ ಹಾಗೂ 13 ಅಡಿ ಉದ್ದವಿದ್ದು, ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಭದ್ರಾ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.