ಚಿಕ್ಕಮಗಳೂರು: ಕೊರೊನಾ ನಿಯಂತ್ರಣಕ್ಕೆ ಜನರು ಸಹಕಾರ ಕೊಡದಿದ್ದರೆ ಹಾಗೂ ಪ್ರಕರಣಗಳು ಹೆಚ್ಚಾದರೆ ಲಾಕ್ಡೌನ್ ಅನಿವಾರ್ಯ ಎಂದು ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಚಿಕ್ಕಮಗಳೂರಿನ ಜ್ಯೂನಿಯರ್ ಕಾಲೇಜಿನಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಜನರ ಜೀವ ಉಳಿಸುವುದು ಸರ್ಕಾರದ ಬದ್ಧತೆ. ಕೊರೊನಾ ನಿಯಂತ್ರಣಕ್ಕೆ ಜನರು ಸಹಕಾರ ಕೊಡದಿದ್ದರೆ ಲಾಕ್ಡೌನ್ ಅನಿವಾರ್ಯ. ಚಿಕ್ಕಮಗಳೂರು ಜಿಲ್ಲೆಯಲ್ಲಿ 48,707 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇಟ್ಟು ಕೊಳ್ಳಲಾಗಿದೆ. ಇಂದು 150 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು ಎಂದರು.
ಓದಿ: ಲಾಕ್ಡೌನ್ ಜಾರಿಯಾದರೂ ನಾವು ನಮ್ಮ ಪಾದಯಾತ್ರೆ ನಿಲ್ಲಿಸುವುದಿಲ್ಲ: ಸರ್ಕಾರಕ್ಕೆ ಡಿಕೆಶಿ ಸವಾಲು
ಪಾದಯಾತ್ರೆಗೆ ಅನುಮತಿ ಕೊಡುವುದು ಬಿಡುವುದು ಬೇರೆ ವಿಷಯ. ಆದರೆ, ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿರುವ ಪಾದಯಾತ್ರೆಗೆ ಬೇಸರವಿದೆ. ಕೋವಿಡ್ ಸಮಯದಲ್ಲಿ ರಾಜಕಾರಣದ ನಡೆ ಸರಿಯಲ್ಲ. ವಿರೋಧ ಪಕ್ಷವಾಗಿ ಹೋರಾಟ ಮಾಡಲು ಅವಕಾಶವಿದೆ. ಆದರೆ, ಅಧಿಕಾರದಲ್ಲಿದ್ದಾಗ ಕಾಂಗ್ರೆಸಿಗರು ಏನೂ ಮಾಡಲಿಲ್ಲ ಎಂದರು.
ಓದಿ: 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನ: ಸಿಎಂ ಚಾಲನೆ
ಸಿಎಂ ಬದಲಾವಣೆ, ಸಚಿವರ ಕೈಬಿಡುವುದು ಗಾಳಿ ಸುದ್ದಿ. ಬೊಮ್ಮಾಯಿ ಸರ್ಕಾರದಲ್ಲಿ ಯಾವ ಸಚಿವರನ್ನು ಕೈ ಬಿಡುವುದಿಲ್ಲ. ಗೃಹ ಇಲಾಖೆ ತೃಪ್ತಿ ಕೊಟ್ಟಿದ್ದು, ಚಾಲೆಂಜ್ ಕೂಡ ಆಗಿದೆ ಎಂದು ತಿಳಿಸಿದರು. ಈ ವೇಳೆ, ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್, ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.