ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇಂದು ಕೂಡ ಹಿಜಾಬ್ ವಿವಾದ ಮುಂದುವರೆದಿದೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ನಗರದ ಮೌಂಟೇನ್ ವ್ಯೂ ಕಾಲೇಜಿನಲ್ಲಿ ತರಗತಿ ಬೇಡ, ಕ್ಯಾಂಪಸ್ ಒಳಗೆ ಬಿಡುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಕ್ಯಾಂಪಸ್ ಒಳಗೆ ಬಿಡಲು ಆಡಳಿತ ಮಂಡಳಿ ನಿರಾಕರಿಸಿದೆ. ಈ ವೇಳೆ ವಿದ್ಯಾರ್ಥಿನಿಯರಿಗೆ ಬೇರೆ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ.
ನಗರದ ಇನ್ನೊಂದು ಕಾಲೇಜಿನಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಪದವಿ ಕಾಲೇಜು ಆರಂಭ ಮಾಡಿದ್ದು, ಗೇಟ್ ಬಳಿಯೇ ನಿಂತು ಪೊಲೀಸರು, ಉಪನ್ಯಾಸಕರು ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಹಿಜಾಬ್ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಹಿಜಾಬ್ ಧರಿಸಿ ಬಂದರೆ ಆ ಕೊಠಡಿಯಲ್ಲಿ ತೆಗೆದು ಹೋಗಬೇಕು ಎಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಹೇಳಿದೆ.
ಹಿಜಾಬ್ ತೆಗೆಯಲ್ಲ ಅಂದ್ರೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ಎಂದು ಚಿಕ್ಕಮಗಳೂರು ನಗರದ ಐಡಿಎಸ್ಜಿ, ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಹೇಳುತ್ತಿದೆ. ಈ ಮಧ್ಯೆ ಖಾಕಿ ಫುಲ್ ಅಲರ್ಟ್ ಆಗಿದೆ. ಈ ಕಾಲೇಜಿನಲ್ಲಿ ಈ ಹಿಂದೆ ಕೇಸರಿ ಮಧ್ಯೆ, ನೀಲಿ ಶಾಲು ಧರಿಸಿ ವಿದ್ಯಾಥಿಗಳು ಪ್ರತಿಭಟಿಸಿದ್ದರು.
ನಗರದ ಪ್ರತಿಷ್ಟಿತ ಎಂಇಎಸ್ ಕಾಲೇಜಿನ ಕ್ಯಾಂಪಸ್‌ನೊಳಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಗೇಟಿನ ಹೊರಗೆ ಪೋಷಕರು ಪ್ರತಿಭಟಿಸಿದ್ದಾರೆ. ಹಿಜಾಬ್ಗೆ ಅವಕಾಶ ನೀಡುವಂತೆ ಪೋಕಷರು ಒತ್ತಾಯ ಮಾಡುತ್ತಿದ್ದು, ಸ್ಥಳಕ್ಕೆ ಪೊಲೀಸರು, ತಹಶೀಲ್ದಾರ್ ಕಾಂತರಾಜ್, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.