ಚಿಕ್ಕಮಗಳೂರು: ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಕೊಡುಗೆ ಏನು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾಧ್ಯಮಗಳ ಮಖಾಂತರ ಪ್ರಶ್ನೆ ಮಾಡಿದ್ದಾರೆ. ಪಂಚರತ್ನ ರಥಯಾತ್ರೆ ಹಿನ್ನೆಲೆ ಶೃಂಗೇರಿಗೆ ಆಗಮಿಸಿದ ಅವರು ಮಾಧ್ಯಮಗೋಷ್ಟಿನ್ನುದೇಶಿಸಿ ಮಾತನಾಡಿದರು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ಕೊಟ್ಟಿರುವುದ ರೈತರು. ಇನ್ನೂ ಕೆಲವರಿಗೆ ಭೂಸ್ವಾದೀನದ ಹಣವನ್ನು ಸರ್ಕಾರ ಕೊಟ್ಟಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಅವರ ಕೊಡುಗೆ ಎನು.? ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡುವುದೊಂದೇ ಅವರ ಕೊಡುಗೆಯಾಗಿದೆ ಎಂದು ಹರಿಹಾಯ್ದರು.
ಇನ್ನು, ಮಾರ್ಚ್ 11ರಂದು ಪ್ರಧಾನಿ ಮೋದಿ ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ ಮಾಡಲು ರಾಜ್ಯಕ್ಕೆ ಆಗಮಿಸಲಿದ್ದಾರೆ. ಆ ರಸ್ತೆ ಧರ್ಮಕ್ಕೆ ಕೊಟ್ಟಿಲ್ಲ. ಈ ರಸ್ತೆಯ ಭೂಸ್ವಾದೀನ ಪ್ರಕ್ರಿಯೆಗಾಗಿ ನಾನು ಮುಖ್ಯಮಂತ್ರಿಯಾಗಿದ್ದಾಗ 14 ತಿಂಗಳಲ್ಲಿ ಸುಮಾರು 9 ಸಭೆಗಳನ್ನು ಮಾಡಿ ಇದಕ್ಕೆ ವೇಗ ಕೊಟ್ಟಿದ್ದೆ. ನರೇಂದ್ರ ಮೋದಿ ಬಂದು ದೇಶ ಬದಲಾವಣೆ ಮಾಡಿಲ್ಲ. ಹಂತ ಹಂತವಾಗಿ ದೇಶ ಅಭಿವೃದ್ಧಿ ಹೊಂದುತ್ತ ಬಂದಿದೆ ಎಂದು ಹೆಚ್ ಡಿಕೆ ಹೇಳಿದರು.
ಪದೇ ಪದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿ ಚರ್ಚೆಗಳನ್ನು ಮಾಡುತ್ತಾರೆ. ಮಾತನಾಡುವಾಗ ಇಲ್ಲಿಯ ವಸ್ತುಸ್ಥಿತಿ ಬಗ್ಗೆ ಮಾತನಾಡಬೇಕಾಗುತ್ತದೆ. ಕರ್ನಾಟಕದ ಜನ ಸುಲಭವಾಗಿ ಸುಳ್ಳಿಗೆ ಮಾರುಹೋಗಲ್ಲ. ಇತರೆ ರಾಜ್ಯಗಳಲ್ಲಿನ ಚುನಾವಣೆ ವ್ಯವಸ್ಥೆಯೇ ಬೇರೆ, ಇಲ್ಲಿಯ ಚುನಾವಣಾ ವ್ಯವಸ್ಥೆಯೇ ಬೇರೆ ಇದೆ. ರಾಜ್ಯದಲ್ಲಿ ಜನರನ್ನು ಮೆಚ್ಚಿಸುವುದು ಅಷ್ಟು ಸುಲಭವಲ್ಲ. ಮೂರು ಸುಳ್ಳುಗಳನ್ನು ಹೇಳಿ ಒಂದು ನಿಜ ಮಾಡುವಂತಹ ರೀತಿ ಇವರು ಹೊರಟಿದ್ದಾರೆ. ಇತ್ತೀಚೆಗೆ ಬಳ್ಳಾರಿಯಲ್ಲಿ ಶಾ ಹೇಳುತ್ತಾರೆ, ನಮ್ಮ ಪಕ್ಷಕ್ಕೆ ಮತ ನೀಡಿದರೆ ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು. ಹಾಗಿದ್ರೆ ಕಳೆದ ಮೂರು ವರ್ಷದ ಆಡಳಿತ ಭ್ರಷ್ಟಾಚಾರದಿಂದ ಕೂಡಿದೆಯಾ.? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಇನ್ನು, ಯಡಿಯೂರಪ್ಪ ಹೇಳುತ್ತಾರೆ ನಾವು ಈ ಬಾರಿ 140 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು. ಈ ಹಿಂದೆ ಕೆಜೆಪಿ ಪಕ್ಷ ಕಟ್ಟಿದಾಗ ಅವರೇ ಹೇಳಿದ್ದರು, ನನ್ನ ಜೀವ ಇರೋವರೆಗೂ ಬಿಜೆಪಿಗೆ ಹೋಗಲ್ಲ ಎಂದು. ಇದೀಗ ನಾನು ಬದುಕಿರೋವರೆಗೂ ಬಿಜೆಪಿಯಲ್ಲೇ ಇರುವೆ ಎಂದು ಹೇಳುತ್ತಾರೆ. ಅವರಿಗೆ ಈಗ ಜ್ಞಾನೋದಯ ಆಗಿರಬೇಕು. ಇನ್ನು, ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ, ಜೆಡಿಎಸ್ನವರು ಗೆದ್ದೆತ್ತಿನ ಬಾಲ ಹಿಡಿಯುವವರು ಎಂದು. ನಾವು ಯಾರ ಬಾಲ ಹಿಡಿಯಲು ಹೊರಟಿಲ್ಲ. ಇವರು ಗೆದ್ದಂತವರ ಸೋತಿರುವ ಎತ್ತಿನ ಬಾಲ ಹಿಡಿಯಲು ಬಂದಿದ್ದಾರೆ. ಸೋತ ಎತ್ತಿನ ಬಾಲ ಹಿಡಿಯುವವರೇ ರಾಷ್ಟ್ರೀಯ ಪಕ್ಷದವರು ಎಂದು ಹೆಚ್ ಡಿಕೆ ಹರಿಹಾಯ್ದರು.
ಶೃಂಗೇರಿ ಕ್ಷೇತ್ರದಲ್ಲಿ ಕಳೆದ 20ವರ್ಷಗಳಿಂದ ಜೆಡಿಎಸ್ ಪಕ್ಷ ಹಿನ್ನಡೆ ಅನುಭವಿಸಿತ್ತು. ಸುಧಾಕರ್ ಶೆಟ್ಟಿ ಅವರಿಗೆ ಜವಾಬ್ಧಾರಿ ಕೊಟ್ಟಮೇಲೆ ಎಲ್ಲಾ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತದಾರರ ವಿಶ್ವಾಸ ಗಳಿಸಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಈ ಬಾರಿ ಜೆಡಿಎಸ್ ಬೆಂಬಲಿಸುವುದಾಗಿ ಜನರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ನಾನೇ ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗಿದ್ದೇನೆ, ವೀರಶೈವ ಲಿಂಗಾಯತರು ಅಪಾರ್ಥ ಮಾಡಿಕೊಳ್ಳಬೇಡಿ: ಬಿಎಸ್ವೈ