ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಈ ವೇಳೆ, ತೇಗೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ಆಂಜನೇಯ ಸ್ವಾಮಿಯು ಬಲಗಡೆ ಹೂವು ನೀಡಿ, ಗೆಲುವಿನ ಮುನ್ಸೂಚನೆ ಕೊಟ್ಟಿರುವ ಘಟನೆ ನಡೆದಿದೆ. ಹೌದು, ಬಲಗೈ ಹಸ್ತದಿಂದ ವಾಯುಪುತ್ರ ಅಪ್ಪಣೆ ನೀಡಿದ್ದು, ತೇಗೂರು ಗ್ರಾಮದ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ವೇಳೆ ಅಪರೂಪದ ಘಟನೆ ಜರುಗಿದೆ. ಮೂರು ಕೈ ಇರುವ ಈ ಆಂಜನೇಯ ಸ್ವಾಮಿ ಅಪ್ಪಣೆ ಬಗ್ಗೆ ಭಕ್ತರಿಗೆ ಅಪಾರ ನಂಬಿಕೆಯಿದೆ. ಬಹುಮತ ಸರ್ಕಾರ ಹಾಗೂ ಹೆತ್ತವರಿಗೆ ದೀರ್ಘಾ ಯುಷ್ಯ ನೀಡುವಂತೆ ಎಚ್.ಡಿ. ಕುಮಾರಸ್ವಾಮಿ ಬೇಡಿಕೊಂಡಿದ್ದರು.
ಅದ್ಧೂರಿಯಾಗಿ ನಡೆದ ಪಂಚರತ್ನ ರಥಯಾತ್ರೆ: ಮೂಡಿಗೆರೆಯಲ್ಲಿ ನಡೆದ 75ನೇ ದಿನ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಯಾತ್ರೆ ವೇಳೆ ಜನರು ಕುಮಾರಸ್ವಾಮಿ ಬಳಿ ಸಂಕಷ್ಟ ಹೇಳಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಶಾಸಕರಿಂದ ತಾರತಮ್ಯ ನಡೆಯುತ್ತಿದೆ. ಮತ ಹಾಕಿದವರಿಗೆ ಹಾಗೂ ಮತ ಹಾಕದವರಿಗೆ ಬೇರೆಯಾಗಿ ನೋಡುತ್ತಾರೆ ಎಂದು ಜನರು ಅಳಲು ತೋಡಿಕೊಂಡರು.
ಜೆಡಿಎಸ್ ಮುಂದೆ ಬ್ರಹ್ಮಾಸ್ತ್ರ ನಡೆಯುವುದಿಲ್ಲ: ನಂತರ, ಚಿಕ್ಕಮಗಳೂರು ನಗರದ ತೇಗೂರಿನ ಅರಸು ಭವನ ಆವರಣದಲ್ಲಿ ಎಚ್ಡಿಕೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ''ಜೆಡಿಎಸ್ ಎರಡು ಜಿಲ್ಲೆಗೆ ಸೀಮಿತ ಎಂದು ಬಿಜೆಪಿ ಹೇಳಿದ್ದಾರೆ. ಆದರೆ, ಅವರ ಭದ್ರ ಕೋಟೆಗಳು ಅಲುಗಾಡುತ್ತಿವೆ. ಮೊದಲು ಅಲ್ಲಿ ಭದ್ರ ಮಾಡಿಕೊಳ್ಳಲಿ. ಯಾವ ಬ್ರಹ್ಮಾಸ್ತ್ರ ಕೂಡ ಜೆಡಿಎಸ್ ಭದ್ರಕೋಟೆ ಜಿಲ್ಲೆಗಳಲ್ಲಿ ನಡೆಯಲ್ಲ'' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಜೆಡಿಎಸ್ ಮುಗಿಸಲು ಆಗುವುದಿಲ್ಲ: ''ಬಿಜೆಪಿಯವರು ಜೆಸಿಬಿ ಮೂಲಕ ಖಜಾನೆ ಲೂಟಿ ಮಾಡುತ್ತಿದ್ದಾರೆ. ಜನರು ಎರಡು ರಾಷ್ಟ್ರೀಯ ಪಕ್ಷಗಳನ್ನ ಹೊರಗಿಡಲು ಜನರು ತೀರ್ಮಾನಿಸಿದ್ದಾರೆ. ಜೆಡಿಎಸ್ ನ ಮುಗಿಸುವುದಾಗಿ ಹೇಳಿದ್ದಾರೆ. ಕೇವಲ 20 ಸ್ಥಾನ ಗೆಲ್ಲುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ಜನರ ಬೆಂಬಲ ನೋಡಿದರೆ ಬಿಜೆಪಿ, ಕಾಂಗ್ರೆಸ್ಗಿಂತ ನಾವು ಒಂದು ಹೆಜ್ಜೆ ಮುಂದೆ ಇದ್ದೇವೆ. ನಾನು ಜನರನ್ನ ಕರೆಸುತ್ತಿಲ್ಲ, ಆದರೆ ಜನರಿದ್ದಲ್ಲಿಗೆ ನಾವು ಹೋಗುತ್ತೇವೆ'' ಎಂದರು.
''ಮೋದಿಯವರು ಖರ್ಗೆ ಬಗ್ಗೆ ಅನುಕಂಪ ತೋರಿಸುತ್ತಿದ್ದಾರೆ. ಆದರೆ ಅಡ್ವಾಣಿ , ಮುರುಳಿ ಮನೋಹರ ಜೋಶಿ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಇದೀಗ ರಾಜ್ಯದಲ್ಲಿ ಚುನಾವಣೆ ಬಂದಿರುವುದರಿಂದ ಬಿಜೆಪಿ ಹಿರಿಯ ನಾಯಕರು ಕರ್ನಾಟಕದಲ್ಲಿ ಬರುತ್ತಿದ್ದಾರೆ. ಯಡಿಯೂರಪ್ಪ ಅವರನ್ನ ಮೂಲೆ ಗುಂಪು ಮಾಡಿ, ಇದೀಗ ಜನರನ್ನ ಓಲೈಕೆ ಮಾಡಲು ಯಡಿಯೂರಪ್ಪಗೆ ಹಸ್ತಲಾಘವ ಮಾಡಿ ತಬ್ಬಿಕೊಳ್ಳುವುದನ್ನು ನೋಡಿದರೆ ಅಚ್ಚರಿ ಆಗುತ್ತದೆ'' ಎಂದು ವ್ಯಂಗ್ಯವಾಡಿದರು.
ಸಿದ್ದು ವಿರುದ್ಧ ಎಚ್ಡಿಕೆ ವಾಕ್ ಸಮರ: ''ಜನರು ಜೆಡಿಎಸ್ ಪರ ನಿಲ್ಲುವ ತೀರ್ಮಾನ ಮಾಡಿದ್ದಾರೆ. ಸಿದ್ಧರಾಮಯ್ಯ ಜೆಡಿಎಸ್ ಬಗ್ಗೆ ಚರ್ಚೆ ಮಾಡಬೇಡಿ. ರಾಜ್ಯದ ಅಭಿವೃದ್ಧಿ ಕುಂಠಿತವಾಗಲು ನಿಮ್ಮ ಪಾಲೂ ಇದೆ. ನಾನು ಅಧಿಕಾರದಲ್ಲಿದ್ದಾಗ ಸ್ಟಾರ್ ಹೋಟೆಲ್ಯೊಂದರಲ್ಲಿ ಇದ್ದರು ಎನ್ನುತ್ತೀರಾ. ಆಗ ನಾನು ಬೆಳಗ್ಗೆ 9 ಗಂಟೆಯಿಂದ ಮಧ್ಯರಾತ್ರಿವರೆಗೆ ಕೆಲಸ ಮಾಡಿದ್ದೇನೆ.
ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸರ್ಕಾರಿ ಬಂಗ್ಲೆ ಕೊಡಲಿಲ್ಲ. ನೀವು ಮಧ್ಯಾಹ್ನವೇ ವಿಧಾನಸೌಧದಿಂದ ಜಾಗಾ ಖಾಲಿ ಮಾಡಿ, ನಿದ್ದೆ ಮಾಡುತ್ತಿದ್ದ ವಿಚಾರವು ನನಗೆ ತಿಳಿದಿದೆ. ನಾನು ಸಮಾಜ ಕಲ್ಯಾಣದ ಅಭಿವೃದ್ಧಿಗಾಗಿ 29 ಸಾವಿರ ಕೋಟಿ ರೂ. ಕೊಟ್ಟಿದ್ದೇನೆ ಎನ್ನುತ್ತೀರಾ ಎಲ್ಲಿ ಹೋಗಿದೆ ಆ ಹಣ? ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ. ಸಿದ್ದರಾಮಯ್ಯ ಮೈತ್ರಿ ಸರ್ಕಾರ ಇದ್ದಾಗ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು
ಇದನ್ನೂ ಓದಿ: ಸರ್ಕಾರದಿಂದ 7ನೇ ವೇತನ ಆಯೋಗ ಶಿಫಾರಸು ಜಾರಿಯಾಗದಿದ್ದರೆ, ನಾವು ಮಾಡುತ್ತೇವೆ: ಸಿದ್ದರಾಮಯ್ಯ