ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ನಗರದ ಕೋರ್ಟ್ ಆವರಣದ ಪಕ್ಕದಲ್ಲೇ ಇರುವ ಗಾಂಧಿ ಪ್ರತಿಮೆಯ ಬಳಿ ಸೇರಿದ ನೂರಾರು ಅತಿಥಿ ಉಪನ್ಯಾಸಕರು, ಹಣ್ಣು-ತರಕಾರಿಗಳನ್ನು ಬೀದಿಯಲ್ಲಿ ಮಾರುತ್ತಾ ರಾಜ್ಯ ಸರ್ಕಾರ, ನಮ್ಮನ್ನು ಇಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಕೇವಲ ತಿಂಗಳಿಗೆ ಹತ್ತರಿಂದ ಹನ್ನೆರಡು ಸಾವಿರ ಸಂಬಳಕ್ಕೆ ಈ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಕೋವಿಡ್ ಬಂದಾಗಿನಿಂದ ಕಳೆದ ಐದು ತಿಂಗಳಿನಿಂದ ಸರ್ಕಾರ ವೇತನ ನೀಡಿಲ್ಲ ಎಂದರು.
ಅತಿಥಿ ಉಪನ್ಯಾಸಕ ಶರೀಫ್ ಮಾತನಾಡಿ, ನಾನು 2009 ರಿಂದ ಸೇವೆ ಸಲ್ಲಿಸುತ್ತಿದ್ದೇನೆ. ಮೊದಲು ನಮಗೆ ಐದು ಸಾವಿರ ಸಂಬಳ ನೀಡುತ್ತಿದ್ದರು. ಅದು ವರ್ಷಕ್ಕೆ ಒಂದು ಬಾರಿ ಮಾತ್ರ. ಈಗ ಹನ್ನೊಂದು ಸಾವಿರ ಸಂಬಳ ನೀಡುತ್ತಿದ್ದಾರೆ. ಈ ಸಂಬಳದಲ್ಲಿ ಕುಟುಂಬ ಸಲಹುವುದು ತುಂಬಾ ಕಷ್ಟಕರವಾಗಿದೆ. ಹಾಗಾಗಿ ಹೊಟ್ಟೆ ಪಾಡಿಗಾಗಿ ಪೈಂಟಿಂಗ್ ಕೆಲಸ ಕೂಡ ಮಾಡುತ್ತಿದ್ದೇನೆ. ಕೂಡಲೇ ಸರ್ಕಾರ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.