ಚಿಕ್ಕಮಗಳೂರು : ವರ್ಷಕ್ಕೊಮ್ಮೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುವ ದುರ್ಗಾಂಭ ದೇವರ ಜಾತ್ರಾ ಮಹೋತ್ಸವ ಈ ಬಾರಿಯೂ ಕೂಡ ಅದ್ದೂರಿಯಾಗಿ ನಡೆಯಿತು. ನಾಲ್ಕು ಜಿಲ್ಲೆಯ ಜನರು ಭಾಗವಹಿಸುವ ಈ ಜಾತ್ರೆ ಬಲು ವಿಶೇಷತೆಯಿಂದ ಕೂಡಿರುತ್ತೆ.
ಓದಿ: ಅದ್ಧೂರಿಯಾಗಿ ನೆರವೇರಿದ ದುರ್ಗಾಂಬ ದೇವಿ ಜಾತ್ರೆ: ಹರಿದು ಬಂದ ಭಕ್ತಸಾಗರ
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಅಂತರಘಟ್ಟೆಯ ದುರ್ಗಾಂಭ ದೇವಿಯ ಸನ್ನಿಧಿಯಲ್ಲಿ ಜನ ಸಾಗರ. ಕೊರೊನಾ ಹಿನ್ನೆಲೆ, ಈ ಬಾರಿ ದೇವಿಯ ಜಾತ್ರೆ ನಡೆಯುತ್ತಾ? ಎಂದು ಈ ಭಾಗದ ಜನರು ಯೋಚನೆಯಲ್ಲಿದ್ದರು.
ಆದರೆ, ಸರ್ಕಾರ, ಹಬ್ಬ ಹಾಗೂ ಜಾತ್ರೆಗಳು ನಡೆಸುವಂತೆ ಅವಕಾಶ ಮಾಡಿಕೊಟ್ಟ ಹಿನ್ನೆಲೆ ಅಂತರಘಟ್ಟೆಯ ಅಮ್ಮ ಅಂತಾನೇ ಕರೆಸಿಕೊಳ್ಳುವ ದುರ್ಗಾಂಭ ದೇವಿಯ ಭಕ್ತರ ಸಂತಸಕ್ಕೆ ಪಾರವೇ ಇರಲಿಲ್ಲ.
ಕಳೆದ ಫೆ.14ರಿಂದ ಆರಂಭವಾದ ಅಂತರಗಟ್ಟೆ ಶ್ರೀ ದುರ್ಗಾಂಭ ಅಮ್ಮನವರ ಮಹಾ ರಥೋತ್ಸವ ಇಂದು ನೆರವೇರಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಸಾವಿರಾರು ಜನ ರಥೋತ್ಸವದಲ್ಲಿ ಭಾಗಿಯಾಗಿ ತಾಯಿಯ ಕೃಪೆಗೆ ಪಾತ್ರರಾಗಿದ್ದಾರೆ.
ಅಂತರಘಟ್ಟೆ ಅಮ್ಮನವರ ಜಾತ್ರೆಗೆ ಅಜ್ಜಂಪುರ, ತರೀಕೆರೆ, ಕಡೂರು, ಚಿಕ್ಕಮಗಳೂರು, ಭದ್ರಾವತಿ, ಶಿವಮೊಗ್ಗ, ಚಿತ್ರದುರ್ಗ ಸೇರಿ ಸುತ್ತಮುತ್ತಲಿನ ಹಳ್ಳಿಗಳಿಂದ ಭಕ್ತರು ಸಾವಿರಾರು ಎತ್ತಿನ ಬಂಡಿಯಲ್ಲಿ ಬಂದು ರಥೋತ್ಸವದಲ್ಲಿ ಭಾಗಿಯಾಗುವುದು ಈ ಜಾತ್ರೆಯ ವಿಶೇಷ.
ಎತ್ತಿನಗಾಡಿಯಲ್ಲಿ ಜಾತ್ರೆಗೆ ಬರುವ ಕೆಲವರು ಇಂದೇ ಊರಿಗೆ ತೆರಳಿದ್ರೆ, ಉಳಿದವರು ಅಡ್ಡ ಪಲ್ಲಕ್ಕಿ ಉತ್ಸವ ಮುಗಿಸಿಕೊಂಡು ತಮ್ಮೂರಿನ ಕಡೆ ಹೆಜ್ಜೆ ಹಾಕುತ್ತಾರೆ. ಈ ಭಾಗದಲ್ಲಿ ನಡೆಯುವ ಅತ್ಯಂತ ಅದ್ದೂರಿ ಜಾತ್ರಾ ಮಹೋತ್ಸವ ಇದಾಗಿದೆ. ಈ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರುವುದು ಮತ್ತೊಂದು ವಿಶೇಷ.