ಚಿಕ್ಕಮಗಳೂರು: ಶಾಲೆಗೆ ಹೋಗುವ ಸಂದರ್ಭದಲ್ಲಿ ಹೃದಯಾಘಾತದಿಂದ ಬಾಲಕಿ ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಜೋಗಣ್ಣನಕೆರೆ ಗ್ರಾಮದಲ್ಲಿ ಇಂದು ನಡೆದಿದೆ. ಮೃತಳನ್ನು ಜೋಗಣ್ಣನಕೆರೆ ಗ್ರಾಮದ ಅರ್ಜುನ್ ಹಾಗೂ ಸುಮಾ ದಂಪತಿಯ ಪುತ್ರಿ ಸೃಷ್ಟಿ (12) ಎಂದು ಗುರುತಿಸಲಾಗಿದೆ. ಅತಿ ಚಿಕ್ಕ ವಯಸ್ಸಿನಲ್ಲಿ ಬಾಲಕಿಗೆ ಹೃದಯಾಘಾತವಾಗಿರುವ ಸುದ್ದಿ ಕೇಳಿ ಗ್ರಾಮಸ್ಥರು ಆಘಾತ ವ್ಯಕ್ತಪಡಿಸಿದ್ದಾರೆ.
7ನೇ ತರಗತಿ ಓದುತ್ತಿರುವ ಸೃಷ್ಟಿ ಎಂದಿನಂತೆ ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದಾಗ ದಾರದಹಳ್ಳಿ ಗ್ರಾಮದ ಶಾಲೆಯ ಮುಂಭಾಗದಲ್ಲಿ ತಲೆ ತಿರುಗಿ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಜೊತೆಗಿದ್ದ ಸಹಪಾಠಿ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು ಶಾಲೆಯ ಮುಂಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ವೈದ್ಯರಿಲ್ಲದ ಕಾರಣ ತಡ ಮಾಡದೇ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ವೈದ್ಯರು ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ತಿಳಿಸಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಸೃಷ್ಟಿಗೆ ಆಗಾಗ ತಲೆ ಸುತ್ತು ಬರುತ್ತಿತ್ತು, ಆದರೆ ಆರೋಗ್ಯವಾಗಿ ಇದ್ದಳು. ಯಾವುದೇ ಸಮಸ್ಯೆ ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
"ಕಳೆದ 20 ದಿನಗಳಿಂದ ತರಬೇತಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಲ್ಲಿನ ವೈದ್ಯರು ಬರುತ್ತಿಲ್ಲ. ತಾಲೂಕು ವೈದ್ಯಾಧಿಕಾರಿಗಳು ಇಲ್ಲಿಗೆ ಬೇರೆ ಯಾವುದೇ ವೈದ್ಯರನ್ನೂ ಹಾಕಿಲ್ಲ. ಇಲ್ಲಿ ವೈದ್ಯರು ಇದ್ದಿದ್ದರೆ ಬಾಲಕಿಯ ಜೀವ ಉಳಿಸಿಕೊಳ್ಳಬಹುದಿತ್ತು" ಎಂದು ಗ್ರಾಮ ಪಂಚಾಯತಿ ಸದಸ್ಯ ವಿಕ್ರಮ ಹೇಳಿದರು.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿದ ಕೊರೊನಾ ಆತಂಕ: ಕೇರಳ ಪ್ರವಾಸಿಗರ ತಡೆಗೆ ಒತ್ತಾಯ