ಚಿಕ್ಕಮಗಳೂರು: ಸ್ನಾನ ಮಾಡಲು ಹೋಗಿ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ಜಿಲ್ಲೆಯ ಶೃಂಗೇರಿಯ ಕರೆಮನೆ ಹೊಸಗದ್ದೆ ಬಳಿ ಇರುವ ತುಂಗಾ ನದಿಯಲ್ಲಿ ನಡೆದಿದೆ.
ಬಿಸಿಲ ಬೇಗೆ ತಣಿಸಲು ಸ್ನಾನ ಮಾಡಲು ಹೋಗಿದ್ದಂತಹ ಸಂದರ್ಭದಲ್ಲಿ ನಾಲ್ವರು ತುಂಗಾ ನದಿಯ ಸುಳಿಗೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಕೊಪ್ಪ ತಾಲೂಕಿನ ನಾಗೇಂದ್ರ (20), ಪ್ರದೀಪ್ (28), ರತ್ನಕರ (30) ಮತ್ತುಶೃಂಗೇರಿಯ ರಾಮಣ್ಣ (32) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರು.
ಸ್ಥಳೀಯ ನುರಿತ ಈಜುಗಾರರ ಸಹಾಯದಿಂದ ಮುಳುಗಿದ್ದ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ನದಿಯ ದಡದಲ್ಲಿ ಜನಸಾಗರವೇ ಸೇರಿದ್ದು, ಈ ದುರಂತಕ್ಕೆ ಅಯ್ಯೋ ಎಂದು ಮರುಗುತ್ತಿದ್ದಾರೆ.ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಮೃತ ದೇಹಗಳನ್ನು ತಾಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದು, ಸ್ಥಳದಲ್ಲಿ ತನಿಖೆ ನಡೆಸಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.