ಚಿಕ್ಕಮಗಳೂರು: ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿವೆ. ದೇಶ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಮುನ್ನುಗುತ್ತಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅದೆಷ್ಟೋ ಗ್ರಾಮಗಳಿಗೆ ಇಂದೂ ಕೂಡ ಮೂಲಭೂತ ಸೌಕರ್ಯವೇ ಇಲ್ಲ. 75 ವರ್ಷದ ನಂತರ ರಾಜ್ಯವನ್ನಾಳಿದ ಪ್ರಮುಖ ರಾಜ ವಂಶದ ಪೈಕಿ ಒಂದಾದ ಹೊಯ್ಸಳ ವಂಶದ ತವರಿಗೆ ಸರ್ಕಾರಿ ಬಸ್ ಸೇವೆ ಆರಂಭವಾಗಿದೆ. ಗ್ರಾಮಕ್ಕೆ ಸರ್ಕಾರಿ ಬಸ್ ಆಗಮಿಸುತ್ತಿದ್ದಂತೆ ಗ್ರಾಮದ ಜನತೆಯ ಅತೀವ ಸಂತೋಷಪಟ್ಟಿದ್ದಾರೆ.
ರಾಜ್ಯವನ್ನಾಳಿದ ಹಲವು ರಾಜಮನೆತನಗಳಲ್ಲಿ ಹೊಯ್ಸಳ ಮನೆತನವೂ ಒಂದು. ಅಂತಹ ಹೊಯ್ಸಳ ರಾಜರ ಮೂಲಸ್ಥಾನವಾದ ಮೂಡಿಗೆರೆ ತಾಲೂಕಿನಲ್ಲಿರುವ ಹೊಯ್ಸಳಲು ಗ್ರಾಮದಲ್ಲಿ ಸ್ವಾತಂತ್ರ್ಯ ಸಿಕ್ಕ 75 ವರ್ಷಗಳ ಬಳಿಕ ಮೊದಲ ಬಾರಿಗೆ ಸರ್ಕಾರಿ ಬಸ್ ಸೇವೆ ಆರಂಭವಾಗಿದೆ. ದಶಕಗಳ ಮನವಿ ಹಾಗೂ ಹೋರಾಟದ ಬಳಿಕ ಅಂತೂ ಇಂತೂ ನಮ್ಮ ಊರಿಗೆ ಸರ್ಕಾರಿ ಬಸ್ ಬಂತೆಂದು ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇವಾಲಯ ಇಂದಿಗೂ ಇದೆ. ಸುಮಾರು 200 ಕ್ಕೂ ಅಧಿಕ ಕುಟುಂಬಗಳಿವೆ. ಕಾಡಂಚಿನ ಈ ಕುಗ್ರಾಮ ಮೂಲಭೂತ ಸಮಸ್ಯೆಗಳಿಂದ ವಂಚಿತವಾಗಿತ್ತು.
75 ವರ್ಷಗಳಿಂದ ಅನೇಕ ಸರ್ಕಾರಗಳು ಬಂದು- ಹೋದರೂ ಗ್ರಾಮದಲ್ಲಿ ಸರ್ಕಾರಿ ಬಸ್ ಓಡಿರಲಿಲ್ಲ. ಈ ಗ್ರಾಮದ ಇತರೆ ಸಮಸ್ಯೆಗಳಿಗೂ ಯಾವ ಸರ್ಕಾರಗಳು ಸ್ಪಂದಿಸಿರಲಿಲ್ಲ. ಬಡವರು-ಕೂಲಿ ಕಾರ್ಮಿಕರೇ ಹೆಚ್ಚಿರುವ ಮೂಲಭೂತ ಸೌಲಭ್ಯ ಹಾಗೂ ಸರ್ಕಾರಿ ಬಸ್ ಸೇವೆಗೆ ಹಲವು ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದರು. ಆದರೆ, ಮಾಡುತ್ತೇವೆ ಅನ್ನೋ ಸರ್ಕಾರ ಹಾಗೂ ಜನ ನಾಯಕರು ಏನನ್ನೂ ಮಾಡಿರಲಿಲ್ಲ. ಬಿಸಿಲು, ಮಳೆ, ಚಳಿ ಗಾಳಿ ಎನ್ನದೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು 5 ಕಿ.ಮೀ ನಡೆದುಕೊಂಡು ಬಂದು ಬಸ್ ಹಿಡಿದು ಶಾಲೆಗೆ - ಕಚೇರಿಗಳಿಗೆ ಹೋಗಬೇಕಾಗಿತ್ತು. ಇಲ್ಲಿನ ನಿವಾಸಿಗಳು ಮೂಡಿಗೆರೆಗೆ ನೂತನವಾಗಿ ಆಯ್ಕೆಯಾದ ಶಾಸಕಿ ನಯನಾ ಮೋಟಮ್ಮರಿಗೂ ಬಸ್ಗಾಗಿ ಮನವಿ ಸಲ್ಲಿಸಿದ್ದರು. ಇದೀಗ ಹೊಯ್ಸಳಲು ಗ್ರಾಮಕ್ಕೆ ಸರ್ಕಾರಿ ಬಸ್ ಬಂದಿರುವುದು ಗ್ರಾಮಸ್ಥರ ದಶಕಗಳ ಹೋರಾಟಕ್ಕೆ ಸಿಕ್ಕ ಜಯ. ಹಾಗಾಗಿ, ಗ್ರಾಮಸ್ಥರು ಬಸ್ಸಿಗೆ ತಳಿರು ತೋರಣಗಳನ್ನು ಕಟ್ಟಿ ಸ್ವಾಗತಿಸಿಕೊಂಡಿದ್ದಾರೆ. ಬಸ್ಸಿನ ಬಾಗಿಲಿಗೆ ಟೇಪ್ ಕಟ್ಟಿ, ಟೇಪ್ ಕತ್ತರಿಸುವ ಮೂಲಕ ಮತ್ತೆಂದು ನಿಲ್ಲದಿರಲಿ ಎಂದು ಸಂಚಾರಕ್ಕೆ ಅಡಿ ಇಟ್ಟಿದ್ದಾರೆ.
ಹೊಯ್ಸಳಲು ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ ಸಿಕ್ಕಿರುವುದರಿಂದ ಶಕ್ತಿ ಯೋಚನೆಯು ಈ ಭಾಗದ ಬಡ ವರ್ಗದವರಿಗೆ ಲಭ್ಯವಾಗಲಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ನೂರಾರು ಹಳ್ಳಿಗಳಿಗೆ ಇಂದಿಗೂ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಹಾಗಾಗಿ, ಸರ್ಕಾರ ಎಲ್ಲಾ ಭಾಗಕ್ಕೂ ಸರ್ಕಾರಿ ಬಸ್ ಬಿಡುವಂತೆ ಮಲೆನಾಡಿಗರು ಆಗ್ರಹಿಸಿದ್ದು, ನುಡಿದಂತೆ ನಡೆದ ಶಾಸಕಿ ನಯನ ಮೋಟ್ಟಮ್ಮ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಇದನ್ನೂ ಓದಿ: ಶಾಲೆಗೆ ಹೋಗಲು ಜೆಸಿಬಿ ಏರಿದ ವಿದ್ಯಾರ್ಥಿಗಳು- ವಿಡಿಯೋ