ಚಿಕ್ಕಮಗಳೂರು: ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಹಲವು ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ನೆರವಾಗಿದ್ದ ಶ್ವಾನಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಬುಧವಾರ ಆತ್ಮೀಯ ಬೀಳ್ಕೊಡುಗೆ ನೀಡಿದೆ. ಇಲಾಖೆಯ ಹಿರಿಯ ಅಧಿಕಾರಿಗಳಿಂದ ಪದಕ, ಪ್ರಶಂಸೆ ಹಾಗೂ ಎಲ್ಲರ ಗೌರವಕ್ಕೆ ಈ ಶ್ವಾನ ಪಾತ್ರವಾಗಿದೆ. ಪೊಲೀಸ್ ಶ್ವಾನಕ್ಕೆ ನಗರದ ಡಿಎಆರ್ ಆವರಣದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಾಯಿತು.
2013ರಲ್ಲಿ ಪೊಲೀಸ್ ಇಲಾಖೆ ಸೇರಿದ ಶ್ವಾನವು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದೆ. ಶ್ವಾನದ ಹ್ಯಾಂಡ್ಲರ್‌ಗಳಾಗಿ ಮಂಜುನಾಥ ಹಾಗೂ ಸಹಾಯಕ ನಿರ್ವಾಹಕ ಕುಮಾರ್ ಕರ್ತವ್ಯ ನಿರ್ವಹಿಸಿದ್ದಾರೆ. ಇವರಿಗೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸಂಶನಾ ಪತ್ರ ನೀಡಿ ಗೌರವಿಸಿದರು.
ಈ ಶ್ವಾನವು ತನ್ನ ಸೇವಾವಧಿಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜರುಗಿದ ಕಳ್ಳತನ, ದರೋಡೆ ಹಾಗೂ ಕೊಲೆ ಇತ್ಯಾದಿ 204 ಪ್ರಕರಣಗಳಲ್ಲಿ 35 ಪ್ರಕರಣದಲ್ಲಿ ಸುಳಿವು ಹಾಗೂ 9 ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇಲಾಖೆಗೆ ಸಹಕರಿಸಿದೆ. ಅಲ್ಲದೆ, ವಾರ್ಷಿಕವಾಗಿ ನಡೆಸುವ ಪೊಲೀಸ್ ಡ್ಯೂಟಿ ಮೀಟ್‌ನಲ್ಲಿಯೂ ಹಲವು ಪದಕಗಳನ್ನು ಪಡೆದಿದೆ.
ಇದನ್ನೂ ಓದಿ: ಹೆಸರಿಗೆ ತಕ್ಕಂತೆ ಸೌಮ್ಯ, ಅಪರಾಧ ಪ್ರಕರಣ ಭೇದಿಸುವಲ್ಲಿ ಚುರುಕಾಗಿದ್ದ ಶ್ವಾನ ವಿಧಿವಶ.. ದಾವಣಗೆರೆ ಪೊಲೀಸ್ ಇಲಾಖೆಗೆ ಆಘಾತ