ಗೌರಿಬಿದನೂರು: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಗೌರಿಬಿದನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ, ಸ್ಥಳೀಯ ಪಕ್ಷಗಳು ಸಾಕಷ್ಟು ಕಸರತ್ತು ನಡೆಸುತ್ತಿವೆ. ಇಂದು ಕ್ಷೇತ್ರದ ಶಾಸಕರ ಸ್ವಗ್ರಾಮದಲ್ಲಿ ಪುಟ್ಟಸ್ವಾಮಿ ಗೌಡರ ಬಣದಿಂದ ಸಭೆ ಏರ್ಪಡಿಸಿದ್ದು, ಮುಂಜಾಗ್ರತವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಕೆಹೆಚ್ಪಿ ವ್ಯವಸ್ಥಾಪಕ ಪುಟ್ಟಸ್ವಾಮಿ ಗೌಡರ ಬಣದಿಂದ ಚುನಾವಣೆ ಪ್ರಚಾರ ಸಭೆಯನ್ನು ಗ್ರಾಮದ ಮುಖಂಡರಾದ ಬಸಪ್ಪರೆಡ್ಡಿ, ಮೈಲಾರಪ್ಪ, ಕಾಲೊನಿ ಮೂರ್ತಿ, ಶ್ರೀನಾಥ್ ನೇತೃತ್ವದಲ್ಲಿ ನಡೆಸಲಾಗಿತ್ತು. ಸುಮಾರು 300ಕ್ಕೂ ಹೆಚ್ಚು ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದು, ಕ್ಷೇತ್ರದ ಶಾಸಕರ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಂಜುನಾಥ್, ಕ್ಷೇತ್ರದಲ್ಲಿ ಸಾಕಷ್ಟು ಬಾರಿ ಪ್ರಚಾರ ನಡೆಸಿದ ಶಾಸಕ ಶಿವಶಂಕರ್ ರೆಡ್ಡಿ ನನ್ನ ಸ್ವಗ್ರಾಮಕ್ಕೆ ಬಂದು ನನ್ನನ್ನು ಸಾಕಷ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಐದು ಬಾರಿ ಶಾಸಕರಾದವರು ಮಾತನಾಡುವ ಮಾತುಗಳಾ ಇವು?. ಆದರೆ ಇದುವರೆಗೂ ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ನೀಡುವುದೂ ಇಲ್ಲ. ಶಾಸಕರ ಸ್ವಗ್ರಾಮದಲ್ಲಿ ಕೊರೊನಾ ಹಿನ್ನೆಲೆ ಮಾಸ್ಕ್ ಕೊಡುವ ಯೋಗ್ಯತೆಯೂ ಸಹ ಶಾಸಕರಿಲ್ಲ. ಅವರ ಬಗ್ಗೆ ಗೌರಿಬಿದನೂರಿನ ಜನತೆಗಿಂತ ನಾಗಸಂದ್ರದ ಜನತೆಗೆ ಗೊತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಕೆಹೆಚ್ಪಿ ಫೌಂಡೇಶನ್ ಸಂಸ್ಥಾಪಕ ಪುಟ್ಟಸ್ವಾಮಿಗೌಡ, ಗ್ರಾಮ ಪಂಚಾಯತಿ ಚುನಾವಣೆಗಳು ಲೋಕಲ್ ಸರ್ಕಾರವಿದ್ದಂತೆ. ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಉತ್ತಮ ಆಡಳಿತ ನಡೆಸಿ ಕೊಟ್ಟು ತೋರಿಸುತ್ತೇವೆ ಎಂದರು.