ಚಿಕ್ಕಮಗಳೂರು: ಬಂಗಾಳ ಕೊಲ್ಲಿಯಲ್ಲಿನ ಬುರೆವಿ ಚಂಡಮಾರುತದಿಂದ ಕಾಫಿ ನಾಡು ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಕೆಲ ಭಾಗದಲ್ಲಿ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿಯಿತು.
ಚಿಕ್ಕಮಗಳೂರು ನಗರ, ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟಿ ಸೇರಿದಂತೆ ಮಲೆನಾಡು ಭಾಗದಲ್ಲಿ ಒಂದು ಗಂಟೆಗೂ ಅಧಿಕ ಕಾಲ ನಿರಂತರವಾಗಿ ಮಳೆ ಸುರಿಯಿತು. ಇದರಿಂದ ಜನಜೀವನ ಸ್ವಲ್ಪ ಅಸ್ತವ್ಯಸ್ತವಾಯಿತು.
ಕೃಷಿಕರಿಗೆ ಸಿಹಿ ಸುದ್ದಿ: ಕನಿಷ್ಠ ಬೆಂಬಲ ಬೆಲೆಯಡಿ ಭತ್ತ, ರಾಗಿ, ಬಿಳಿ ಜೋಳ, ತೊಗರಿ, ಹೆಸರು ಕಾಳು ಖರೀದಿ
ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಸುರಿದ ಮಳೆಗೆ ಕಾಫಿ ಬೆಳೆಗಾರರು ಕಂಗಾಲಾದರು. ಕಾಫಿ ಬೆಳೆ ಕಟಾವಿಗೆ ಬಂದಿದ್ದು, ಇದೇ ವೇಳೆ ಮಳೆ ಸುರಿದಿದ್ದು ಫಲವೆಲ್ಲ ನೆಲಕ್ಕೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಬುರೆವಿ ಚಂಡುಮಾರುತ ತಂದೊಡ್ಡಿತು ಎಂದು ಬೆಳೆಗಾರರು ಅಲವತ್ತುಕೊಂಡರು.
ಬಣಕಲ್, ಕೊಟ್ಟಿಗೆಹಾರ,ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಳೆಯಿಂದಾಗಿ ವಾಹನ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಕೆಲವು ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಯಿತು.