ಚಿಕ್ಕಮಗಳೂರು: ನಾಳೆ ಸಿಎಂ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿ ತೆಗೆದುಕೊಳ್ಳುವ ನಿರ್ಣಯಕ್ಕೆ ಶಿಕ್ಷಣ ಇಲಾಖೆ ಬದ್ಧವಾಗಿದೆ. ತಜ್ಞರು ಹಸಿರು ನಿಶಾನೆ ತೋರಿದ್ರೆ ಶಾಲೆ ಆರಂಭಿಸಲು ಇಲಾಖೆ ಸಂಪೂರ್ಣ ತಯಾರಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 9 ರಿಂದ 12 ರವರೆಗೆ ಶಾಲೆ ಪ್ರಾರಂಭವಾದ ನಂತರ ಪೋಷಕರು ಹಾಗೂ ಮಕ್ಕಳಲ್ಲಿ ಉತ್ಸಾಹ ಕಂಡುಬರುತ್ತಿದೆ. ಅನೇಕ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಬಹುತೇಕ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ತೆರೆಯುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಇನ್ನು 6 ರಿಂದ 8 ನಂತರ ಒಂದನೇ ತರಗತಿಯಿಂದ 5 ನೇ ತರಗತಿಗಳನ್ನು ಆರಂಭ ವಿಚಾರದಲ್ಲಿ ತಜ್ಞರ ಅಭಿಪ್ರಾಯ ಮುಖ್ಯ. ಮಹಾಮಾರಿ ಕೊರೊನಾ ಕಾರಣದಿಂದ ಸಿಎಂ ತಜ್ಞರ ಜೊತೆ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ನಾಳೆ ಸಿಎಂ ನೇತೃತ್ವದಲ್ಲಿ ತಜ್ಞರ ಅಭಿಪ್ರಾಯ ಬಂದ ಮೇಲೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಮೈಸೂರು ಗ್ಯಾಂಗ್ ರೇಪ್ ಕೇಸ್ ಬಗ್ಗೆ ಮಾತನಾಡಿ, ಅತ್ಯಾಚಾರ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಭಾರತದಲ್ಲಿ ಹೆಣ್ಣು ಮಕ್ಕಳನ್ನು ಪೂಜನೀಯ ಭಾವನೆಯಲ್ಲಿ ನೋಡಲಾಗುತ್ತದೆ. ದುಷ್ಕರ್ಮಿಗಳು ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡಿ ಹೀನಕೃತ್ಯ ಎಸಗಿದ್ದಾರೆ. ಆ ಯುವಕರ ಕೃತ್ಯವನ್ನು ಸಮಾಜ ವಿರೋಧಿಸುವುದು ಸರ್ವೇ ಸಾಮಾನ್ಯ. ಪ್ರಜಾಪ್ರಭುತ್ವ ದೇಶದಲ್ಲಿ ಹೆದರಿಕೆ ಬರುವಂತಹ ಕಠಿಣ ನಿರ್ಣಯಗಳು ಬರಬೇಕು. ಮೌಲ್ಯಾಧಾರಿತ ಶಿಕ್ಷಣ ಒಂದೇ ಇವುಗಳನ್ನು ತಡೆಯಲು ಇರುವ ಮಾರ್ಗ ಎಂದರು.
ಇದನ್ನೂ ಓದಿ: ಪ್ರಾಥಮಿಕ ಶಾಲೆಗಳ ಭೌತಿಕ ತರಗತಿ ಆರಂಭ ವಿಚಾರ: ನಾಳೆ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ