ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಚರಿಸುತ್ತಿರುವ ದತ್ತ ಜಯಂತಿ ಆರಂಭವಾಗಿದ್ದು, 29ರವರೆಗೂ ನಡೆಯಲಿದೆ. ಈಗಾಗಲೇ ದತ್ತ ಭಕ್ತರು ಮಾಲೆ ಧರಿಸಿ ವ್ರತದಲ್ಲಿದ್ದಾರೆ.
ವ್ರತದಲ್ಲಿರುವ ಭಕ್ತರು ಡಿಸೆಂಬರ್ 27ರಂದು ಅನಸೂಯ ಜಯಂತಿ, 28ರಂದು ನಗರದಲ್ಲಿ ಸಾಂಕೇತಿಕ ಶೋಭಾಯಾತ್ರೆ ಹಾಗೂ 29ರಂದು ದತ್ತ ಪೀಠದಲ್ಲಿ ಪೂಜೆ ನಡೆಸಿ ದತ್ತ ಪಾದುಕೆ ದರ್ಶನ ಮಾಡಲಿದ್ದಾರೆ. ಈ ಮೂರು ದಿನಗಳ ಕಾಲ ಕೂಡ ದತ್ತ ಪೀಠದಲ್ಲಿ ಪೂಜೆ ನಡೆಯಲಿದೆ.
ರಾಜ್ಯಾದ್ಯಂತ ಮಾಲೆ ಧರಿಸಿರುವ ಭಕ್ತರು ಕೂಡ ಅಂದು ದತ್ತ ಪೀಠಕ್ಕೆ ಬಂದು ಪೂಜೆ ಸಲ್ಲಿಸಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಹಾಗೂ ಪ್ರವಾಸಿಗರು ಸೇರಿದಂತೆ ದತ್ತ ಭಕ್ತರಿಗೂ ಕೂಡ ಯಾವುದೇ ತೊಂದರೆ ಆಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ದತ್ತ ಪೀಠ, ಸೀತಾಳಯ್ಯನ ಗಿರಿ, ಹೊನ್ನಮ್ಮನ ಹಳ್ಳ ಹಾಗೂ ಮಾಣಿಕ್ಯಧಾರ ಪ್ರವಾಸಿ ತಾಣಗಳ ಭೇಟಿಗೆ ಸಂಪೂರ್ಣ ನಿಷೇಧ ಹೇರಿದೆ.
ಡಿಸೆಂಬರ್ 25 ಸಂಜೆ 6 ಗಂಟೆಯಿಂದ ಡಿಸೆಂಬರ್ 30ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಭಾಗದ ಪ್ರವಾಸಿ ತಾಣಗಳಿಗೆ ನಿಷೇಧ ಹೇರಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.