ಚಿಕ್ಕಮಗಳೂರು: ಚಿನ್ನಕ್ಕಿಂತಲೂ ದುಬಾರಿಯಾದ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಚಿಕ್ಕಮಗಳೂರು ನಗರದ ಸಿಇಎನ್ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮಹಮದ್ ಜರ್ತಾಬ್ ಬಂಧಿತ ಆರೋಪಿ. ನಗರದ ಪವಿತ್ರ ವನದ ಬಳಿ ಕಾರಿನಲ್ಲಿ ನಿಷೇಧಿತ ಮಾದಕ ವಸ್ತುವನ್ನು ಕಾರಿನಲ್ಲಿ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುವಾಗ ಪೊಲೀಸರು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಶಬೀರ್ ಎಂಬಾತ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆರೋಪಿಗಳಿಂದ ಒಂದು ಲಕ್ಷ ಬೆಲೆ ಬಾಳುವ 12 ಗ್ರಾಂ ಡ್ರಗ್ಸ್, ಒಂದು ಕಾರು ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದಿರುವ ಮಾದಕ ವಸ್ತು ಅತ್ಯಂತ ದುಬಾರಿಯಾಗಿದ್ದು, ಚಿನ್ನಕ್ಕಿಂತ ಹೆಚ್ಚಿನ ಬೆಲೆಯುಳ್ಳದ್ದಾಗಿದೆ. ಇದು ಎಲ್ಲಿಂದ ಬಂತು?, ಯಾರು ಇದರ ಪೆಡ್ಲರ್ ಎಂಬ ಬಗ್ಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಗೋಮಾಂಸ ಮಾರುತ್ತಿದ್ದವನಿಗೆ ಧರ್ಮದೇಟು: ಮತ್ತೊಂದೆಡೆ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಭಜರಂಗದಳ ಕಾರ್ಯಕರ್ತರು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮುನೆ ಎಸ್ಟೇಟ್ ಬಳಿ ನಡೆದಿದೆ. ಮೂಡಿಗೆರೆ ತಾಲೂಕಿನ ಕಾಫಿ ತೋಟಗಳಿಗೆ ಕೂಲಿ ಅರಿಸಿ ಬಂದಿರುವ ಅಸ್ಸೋಂ ಮೂಲದ ವ್ಯಕ್ತಿ ಸಿಮೆಂಟ್ ಚೀಲದಲ್ಲಿ ಗೋಮಾಂಸವನ್ನ ತುಂಬಿಕೊಂಡು ಬೈಕಿನಲ್ಲಿ ಮಾರಾಟಕ್ಕೆ ಕೊಂಡೊಯುತ್ತಿದ್ದನಂತೆ. ಈ ಬಗ್ಗೆ ವಿಷಯ ತಿಳಿದ ಭಜರಂಗಳ ಕಾರ್ಯಕರ್ತರು ದಾಳಿ ನಡೆಸಿ ಚೀಲವನ್ನು ನೋಡಿದಾಗ ಗೋಮಾಂಸ ಇರುವುದು ಗೊತ್ತಾಗಿದೆ. ಕೂಡಲೇ ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗೋಣಿಬೀಡು ಪಿಎಸ್ಐ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗಷ್ಟೇ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಡಬಗೆರೆ ಬಳಿ ಅಸ್ಸೋಂ ಮೂಲದ ಕಾರ್ಮಿಕರು ಚೀಲದಲ್ಲಿ ಗೋಮಾಂಸ ತುಂಬಿಕೊಂಡು ಮಾರಾಟಕ್ಕೆ ಯತ್ನಿಸುವಾಗ ಸಿಕ್ಕಿಬಿದ್ದಿದ್ದರು. ಜಿಲ್ಲೆಯಲ್ಲಿ ಈ ರೀತಿಯ ಸಾಕಷ್ಟು ಪ್ರಕರಣಗಳಿವೆ. ಆದರೆ ಭಜರಂಗದಳ ಕಾರ್ಯಕರ್ತರು ಇವರು ಅಸ್ಸೋಂನವರಲ್ಲ. ಅಕ್ರಮ ಬಾಂಗ್ಲಾ ವಲಿಸಿಗರು ಎಂದು ಆರೋಪಿಸುತ್ತಿದ್ದಾರೆ.
28 ಕೋಟಿ ರೂ ಮೌಲ್ಯದ ಕೊಕೇನ್ ವಶ: ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದರು. ಬ್ಯಾಗ್ನಲ್ಲಿ ಗುಪ್ತವಾಗಿ ಸಾಗಿಸುತ್ತಿದ್ದ 28 ಕೋಟಿ ರೂಪಾಯಿ ಮೌಲ್ಯದ 2.81 ಕೆಜಿ ಕೊಕೇನ್ ಡ್ರಗ್ಸ್ ಜಪ್ತಿ ಮಾಡಿದ್ದು, ಪ್ರಯಾಣಿಕನನ್ನು ಬಂಧಿಸಿದ್ದರು. ಆರೋಪಿ ತಾನು ಹನಿಟ್ರ್ಯಾಪ್ಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾನೆ. ವಿಮಾನ ನಿಲ್ದಾಣದಲ್ಲಿ ಹ್ಯಾಂಡ್ಬ್ಯಾಗ್ನಲ್ಲಿಟ್ಟು ಸಾಗುತ್ತಿದ್ದಾಗ ಅನುಮಾನದ ಮೇರೆಗೆ ಪೊಲೀಸರು ಆತನನ್ನು ತಪಾಸಣೆಗೆ ಒಳಪಡಿಸಿದ್ದರು. ಬ್ಯಾಗ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದರಲ್ಲಿ ಏನೋ ಇರುವುದು ಕಂಡುಬಂದಿತ್ತು. ಬ್ಯಾಗ್ ಭಾರ ಇದ್ದುದರಿಂದ ವಶಕ್ಕೆ ಪಡೆದಿದ್ದರು. ಬಳಿಕ ಅದನ್ನು ತೆಗೆದು ನೋಡಿದಾಗ ವಿಶೇಷವಾಗಿ ರೂಪಿಸಲಾದ ಪ್ಯಾಕ್ನಲ್ಲಿ ಡ್ರಗ್ಸ್ ಇರುವುದು ಗೊತ್ತಾಗಿತ್ತು.
ಇದನ್ನೂ ಓದಿ: ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ: 28 ಕೋಟಿ ರೂ ಮೌಲ್ಯದ ಕೊಕೇನ್ ವಶ