ಚಿಕ್ಕಮಗಳೂರು: ಡಾ. ಅಂಬೇಡ್ಕರ್ ಭಾವಚಿತ್ರ ಹರಿದು, ಅವರ ಭಾವಚಿತ್ರದ ಮೇಲೆ ಚಪ್ಪಲಿ ಹಾರ ಹಾಕಿರುವ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ಗಡಿಹಳ್ಳಿಯಲ್ಲಿ ಈ ಘಟನೆ ನಡೆದಿದ್ದು,ಖಾಸಗಿ ವಾಹಿನಿಯಲ್ಲಿ ಬರುವ 'ಮಹಾನಾಯಕ' ಧಾರವಾಹಿಯ ಫ್ಲೆಕ್ಸ್ ಹಾಕಿ ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ದಲಿತ ಸಂಘಟನೆಯವರು ಧನ್ಯವಾದ ಹೇಳಿದ್ದರು. ಆದರೆ, ಯಾರೋ ಕಿಡಿಗೇಡಿಗಳು ರಾತ್ರಿ ಈ ಫ್ಲೆಕ್ಸ್ ಬಳಿ ಬಂದು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕತ್ತರಿ ಹಾಕಿ ಚಪ್ಪಲಿ ಹಾರ ಹಾಕಿದ್ದು, ಇದರಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಈ ವಿಷಯ ತಿಳಿದು, ಕೂಡಲೇ ಸ್ಥಳಕ್ಕೆ ಡಿವೈಎಸ್ಪಿ ರೇಣುಕಾ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಅನುಮಾನ ಇದ್ದ ಕೆಲ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ದಲಿತ ಸಂಘಟನೆಯ ಕಾರ್ಯಕರ್ತರು ಅಜ್ಜಂಪುರ ತಹಶೀಲ್ದಾರ್ ಅವರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.