ಚಿಕ್ಕಮಗಳೂರು: ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಹೆರಿಗೆಯಾದ ಫಲಾನುಭವಿಗಳ ಖಾತೆಗೆ 5 ಸಾವಿರ ಸಹಾಯಧನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಜಿಲ್ಲೆಯ ಒಟ್ಟು 3,448 ಫಲಾನುಭವಿಗಳ ಖಾತೆಗೆ ಮೂರು ಕಂತುಗಳಲ್ಲಿ 5,000 ರೂ. ಸಹಾಯಧನ ನೀಡಲಾಗಿದೆ. ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳಿದ್ದಲ್ಲಿ ಅವರನ್ನು ಗುರುತಿಸಿ ಇದರ ಉಪಯೋಗ ದೊರೆಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಪೊಲೀಸ್, ಕಾನೂನು ಸೇವೆ, ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಒದಗಿಸುವ ಉದ್ದೇಶದಿಂದ ಸಖಿ ಕೇಂದ್ರ ಆರಂಭಿಸಲಾಗಿದೆ. ನಗರದಲ್ಲಿ ರುಕ್ಮಿಣಿಯಮ್ಮ ಹೆರಿಗೆ ಆಸ್ಪತ್ರೆಯಲ್ಲಿ ಸಖಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸಮಾಲೋಚಕರು, ವಕೀಲರು, ಸಮಾಜ ಸೇವಾ ಕಾರ್ಯಕರ್ತರು ಸೇರಿದಂತೆ ಹಲವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ 2020ರ ಏಪ್ರಿಲ್‌ನಿಂದ-ಸೆಪ್ಟಂಬರ್ ವರೆಗೆ ಒಟ್ಟು 18 ಅತ್ಯಾಚಾರ ಪ್ರಕರಣಗಳು, 7 ಬಾಲ್ಯವಿವಾಹ ಪ್ರಕರಣ, 12 ಲೈಂಗಿಕ ದೌರ್ಜನ್ಯ ಹಾಗೂ 7 ಅಪಹರಣ ಪ್ರಕರಣಗಳು ಸೇರಿದಂತೆ ಒಟ್ಟು 45 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 8 ಕೇಸ್‌ಗಳು ಇತ್ಯರ್ಥವಾಗಿ 37 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಬಾಲ್ಯವಿವಾಹ ಮತ್ತು ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ಅಂತಹ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, 2020ರ ಏಪ್ರಿಲ್-ಸೆಪ್ಟಂಬರ್ ವರೆಗೆ ಒಟ್ಟು 55 ದೂರುಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.