ಚಿಕ್ಕಮಗಳೂರು : ಬೆಳಕಿನ ಹಬ್ಬ ದೀಪಾವಳಿಯ ಮಹಾ ಅಮಾವಾಸ್ಯೆಯಂದು ದೇವೀರಮ್ಮ ದೇವಾಲಯದ ಬಾಗಿಲು ತಾನಾಗಿಯೇ ತೆರೆಯುತ್ತೆ. ಇದನ್ನ ನೋಡಲು ಇಂದು ಭಕ್ತರ ದಂಡೆ ಹರಿದು ಬಂದಿತ್ತು.
ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಆಚರಣೆಯಂತೆ ಈ ಬಾರಿಯೂ ಗರ್ಭಗುಡಿಯ ಬಾಗಿಲಲ್ಲಿ ಹಾಕಿದ ಪರದೇ ತಾನಾಗಿಯೇ ತೆರದುಕೊಳ್ಳುವ ಮೂಲಕ ಆಕೆ ಭಕ್ತರ ನಂಬಿಕೆ ಹುಸಿಮಾಡಿಲ್ಲ. ಬೆಟ್ಟದಲ್ಲಿ ನೆಲೆಸಿದ್ದ ದೇವೀರಮ್ಮ ದೇವಿ ಇಂದು ಗಾಳಿರೂಪದಲ್ಲಿ ಗರ್ಭಗುಡಿ ಸೇರಿದ್ದಾಳೆ ಎಂಬ ನಂಬಿಕೆಯನ್ನು ಆಕೆ ಜೀವಂತವಾಗಿರಿಸಿದ್ದಾಳೆ. ದೀಪಾವಳಿಯ ಮೂರು ದಿನಗಳ ಕಾಲ ಬಿಂಡಿಗದಲ್ಲಿ ದೇವೀರಮ್ಮಳ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ನಿನ್ನೆಯಿಂದಲೇ ಜಾತ್ರೆ ಆರಂಭವಾಗಿದೆ.
ಇಂದು ದೇವಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು, ಮೊದಲನೇ ದಿನವೇ ಬೆಟ್ಟದಲ್ಲಿ ದೇವಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಅಮಾವಾಸ್ಯೆಯ ದಿನವಾದ ಇಂದು ಗಾಳಿರೂಪದಲ್ಲಿ ಗ್ರಾಮದ ಗುಡಿಗೆ ಪ್ರವೇಶಿಸುತ್ತಾಳೆ ಅನ್ನೋದು ಗ್ರಾಮಸ್ಥರ ನಂಬಿಕೆ. ಇಂದಿನ ಶುಭ ಮುಹೂರ್ತದಲ್ಲಿ ಸಂಭವಿಸುವ ಪವಾಡವನ್ನು ನೋಡಲು ಭಕ್ತರ ದಂಡೇ ಹರಿದು ಬಂದಿತ್ತು.
ಅರ್ಚಕರು ಅಷ್ಟ ದಿಕ್ಕುಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಾಲಯವನ್ನು ಪ್ರದಕ್ಷಿಣಿ ಹಾಕಿ ಮುಗಿಸುತ್ತಿದ್ದಂತೆ ಗಂಟೆ, ವಾದ್ಯಗೋಷ್ಠಿಗಳು ಮೊಳಗಲಾರಂಭಿಸಿದವು. ದೇವಾಲಯದ ಬಾಗಿಲಲ್ಲಿ ಹಾಕಿದ ಪರದೆ ತಾನಾಗಿಯೇ ತೆರೆದುಕೊಂಡು ಬೆಟ್ಟದ ಮೇಲೆ ನೆಲೆಸಿರುವ ದೇವೀರಮ್ಮ ಇಂದಿನ ಶುಭ ಮುಹೂರ್ತದಲ್ಲಿ ಗಾಳಿ ರೂಪದಲ್ಲಿ ಗರ್ಭಗುಡಿ ಪ್ರವೇಶ ಮಾಡಿರುವುದನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.