ಚಿಕ್ಕಮಗಳೂರು: ಬೆಳಕಿನ ಹಬ್ಬ ದೀಪಾವಳಿಯ ಮಹಾ ಅಮಾವಾಸ್ಯೆಯಂದು ದೇವಿರಮ್ಮ ದೇವಾಲಯದ ಬಾಗಿಲು ತಾನಾಗಿಯೇ ತೆರೆಯುತ್ತದೆ. ಇದನ್ನು ನೋಡಲು ಇಂದು ಭಕ್ತರ ದಂಡೆ ಹರಿದು ಬಂದಿತ್ತು. ಅನಾದಿಕಾಲದಿಂದ ನಡೆದುಕೊಂಡು ಬರುತ್ತಿರುವ ಆಚರಣೆಯಂತೆ ಈ ಬಾರಿಯೂ ಗರ್ಭಗುಡಿಯ ಬಾಗಿಲಲ್ಲಿ ಹಾಕಿದ ಪರದೆ ತಾನಾಗಿಯೇ ತೆರೆದುಕೊಳ್ಳುವ ಮೂಲಕ ಭಕ್ತರ ನಂಬಿಕೆ ಮತ್ತಷ್ಟು ಭದ್ರವಾಯಿತು. ಬೆಟ್ಟದಲ್ಲಿ ನೆಲೆಸಿದ್ದ ದೇವಿರಮ್ಮ ದೇವಿ ಇಂದು ಗಾಳಿ ರೂಪದಲ್ಲಿ ಗರ್ಭಗುಡಿ ಸೇರಿದ್ದಾಳೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮಳ ದೇವಸ್ಥಾನದಲ್ಲಿ ದೀಪಾವಳಿಯ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ನಿನ್ನೆಯಿಂದಲೇ ಈ ಜಾತ್ರೆ ಆರಂಭವಾಗಿದೆ. ಇಂದು ದೇವಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಮೊದಲನೇ ದಿನ ಬೆಟ್ಟದಲ್ಲಿ ದೇವಿ ಭಕ್ತರಿಗೆ ದರ್ಶನ ನೀಡಿದ್ದಾಳೆ.
ಅಮಾವಾಸ್ಯೆಯ ದಿನವಾದ ಇಂದು ಗಾಳಿಯ ರೂಪದಲ್ಲಿ ಗ್ರಾಮದ ಗುಡಿಗೆ ದೇವಿ ಪ್ರವೇಶಿಸುತ್ತಾಳೆ ಅನ್ನೋದು ಭಕ್ತರ ನಂಬಿಕೆ. ಇಂದು ಶುಭ ಮುಹೂರ್ತದಲ್ಲಿ ಸಂಭವಿಸುವ ಪವಾಡ ನೋಡಲು ಭಕ್ತರ ದಂಡೆ ಹರಿದು ಬಂದಿತ್ತು. ಅರ್ಚಕರು ಅಷ್ಟ ದಿಕ್ಕುಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಮುಗಿಸುತ್ತಿದ್ದಂತೆ ಗಂಟೆ, ವಾದ್ಯ ಗೋಷ್ಠಿಗಳು ಮೊಳಗುತ್ತಿದವು. ಈ ಸಂದರ್ಭದಲ್ಲಿ ದೇವಾಲಯದ ಬಾಗಿಲಲ್ಲಿ ಹಾಕಿದ ಪರದೆ ತಾನಾಗಿಯೇ ತೆರೆದುಕೊಂಡಿತು. ಬೆಟ್ಟದ ಮೇಲೆ ನೆಲೆಸಿರುವ ದೇವಿರಮ್ಮ ಗಾಳಿಯ ರೂಪದಲ್ಲಿ ಗರ್ಭಗುಡಿ ಪ್ರವೇಶಿಸಿದಳು. ಇದನ್ನು ನೋಡಿದ ಭಕ್ತರು ಪುಳಕಿತರಾದರು.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಬಿಂಡಿಗ ದೇವಿರಮ್ಮ ಜಾತ್ರೋತ್ಸವ, ಬೆಟ್ಟಕ್ಕೆ ಭಕ್ತ ಸಾಗರ: ಆಕರ್ಷಕ ಡ್ರೋನ್ ದೃಶ್ಯ