ಚಿಕ್ಕಮಗಳೂರು: ಪಿಯುಸಿ ವಿದ್ಯಾರ್ಥಿನಿಗೆ ಹಾಸ್ಟೆಲ್‍ನಲ್ಲಿ ಹೆರಿಗೆ ಆಗಿರುವ ಆತಂಕಕಾರಿ ಘಟನೆ ನಗರದ ಹಾಸ್ಟೆಲ್‍ವೊಂದರಲ್ಲಿ ನಡೆದಿದ್ದು, ದಲಿತ ಸಂಘಟನೆಗಳು ಒಂಬತ್ತು ತಿಂಗಳು ವಾರ್ಡನ್ ಸೇರಿದಂತೆ ಯಾರಿಗೂ ಗೊತ್ತೇ ಆಗಿಲ್ವ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಸುಮಾರು 200 ಜನ ಹೆಣ್ಣು ಮಕ್ಕಳಿರುವ ಹಾಸ್ಟೆಲ್‍ನಲ್ಲಿ ದ್ವಿತೀಯ ಪಿಯುಸಿಯ ಓರ್ವ ವಿದ್ಯಾರ್ಥಿನಿಗೆ ವಸತಿನಿಲಯದಲ್ಲೇ ಡೆಲಿವರಿ ಆಗಿದೆ ಎಂದು ದಲಿತ ಸಂಘಟನೆ ಆರೋಪಿಸಿದೆ. ಪ್ರಕರಣವನ್ನು ಹೊರಬರಲು ಬಿಡದೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಹಾಸ್ಟೆಲ್ ವಾರ್ಡನ್ ಮುಚ್ಚಿ ಹಾಕಿದ್ದಾರೆ ಎಂದು ದೂರಲಾಗಿದೆ.
ವಿಷಯ ತಿಳಿದ ಕೂಡಲೇ ಸಮಾಜ ಕಲ್ಯಾಣ ಅಧಿಕಾರಿಗೆ ಕೇಳಿದರೆ, ವಿದ್ಯಾರ್ಥಿನಿ ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದಳು, ಹಾಗಾಗಿ ನಮಗೆ ಗೊತ್ತಾಗಿಲ್ಲ. ವಿದ್ಯಾರ್ಥಿನಿಯನ್ನು ಮನೆಗೆ ಕಳಿಸಿದ್ದು, ಆಕೆಯ ಗರ್ಭಧಾರಣೆಗೆ ಕಾರಣವಾಗಿರುವ ಹುಡುಗನ ವಿರುದ್ಧ ಪೊಕ್ಸೋ ಕೇಸ್ ದಾಖಲಿಸಿದ್ದೇವೆ ಎಂದಿದ್ದಾರೆ.
ವಾರ್ಡನ್ ವಿರುದ್ಧ ಅಸಮಾಧಾನ: ಹಾಸ್ಟೆಲ್‍ನಲ್ಲಿ ಇಬ್ಬರು ವಾರ್ಡನ್ ಇದ್ದಾರೆ. ಅವರು ಏನು ಮಾಡುತ್ತಾರೆ. ಸರ್ಕಾರಿ ಹಾಸ್ಟೆಲ್‍ನಲ್ಲೇ ರಕ್ಷಣೆ ಇಲ್ಲ ಅಂದ ಮೇಲೆ ಮಕ್ಕಳನ್ನು ಹೇಗೆ ಕಳಿಸೋದು. ವಾರ್ಡನ್ ಕೆಲಸ ಊಟ ಹಾಕಿ, ಬಿಲ್ ಮಾಡ್ಕೋಂಡು ದುಡ್ ತೆಗೆದುಕೊಳ್ಳುವುದು ಅಷ್ಟೇನಾ? ಎಂದು ದಲಿತ ಸಂಘಟನೆಯವರು ಪ್ರಶ್ನಿಸಿದ್ದಾರೆ. ಹಾಸ್ಟೆಲ್‍ನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ತಪಾಸಣೆ ಮಾಡಬೇಕು. ಅದನ್ನು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಹಾಗೆ ತಪಾಸಣೆಗೆ ಒಳಪಡಿಸಿದ್ದರೆ, ಈ ಪ್ರಕರಣ ಆಗಲೇ ಹೊರಗೆ ಬರುತ್ತಿತ್ತು. ಆದರೆ, ಒಂಬತ್ತು ತಿಂಗಳ ಬಳಿಕ ಹಾಸ್ಟೆಲ್‍ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ ಅಂದರೆ ಒಳಗೆ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ವಾರ್ಡನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕೆಲಸದಿಂದಲೇ ವಜಾ: ಜಿಲ್ಲಾ ಸಮಾಜ ಕಲ್ಯಾಣಧಿಕಾರಿಯೂ ಮಹಿಳೆಯಾಗಿ, ಹಾಸ್ಟೆಲ್ ವಾರ್ಡನ್ ಕೂಡ ಮಹಿಳೆಯಾಗಿದ್ದಾರೆ. ಇಷ್ಟೆಲ್ಲ ಘಟನೆ ಆಗಿದ್ದರೂ ಅವರೇನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ಗೊತ್ತಿದ್ದೇ ಆಯ್ತಾ. ಅಥವಾ ಗೊತ್ತಿಲ್ದೆ ಇದೆಲ್ಲಾ ನಡೆಯಿತಾ ಎಂಬ ಪ್ರಶ್ನೆ ಮೂಡಿದೆ ಎಂದು ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಬೇಜವಾಬ್ದಾರಿ ಹೊಂದಿರುವ ಇಂತಹ ವಾರ್ಡನ್‍ಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿ ಕೆಲಸದಿಂದಲೇ ವಜಾ ಮಾಡಬೇಕೆಂದು ಡಿಎಸ್ಎಸ್ ಮುಖಂಡರು ಆಗ್ರಹಿಸಿದ್ದಾರೆ.
ಓದಿ: ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಆಸ್ಪತ್ರೆ ಒಳಾಂಗಣ ದಾರಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ