ಚಿಕ್ಕಮಗಳೂರು: ಚಿಕ್ಕಮಗಳೂರಿನ ಪ್ರಕೃತಿಯ ಐಸಿರಿ ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿ ಅಸಂಖ್ಯಾತ ಪ್ರಾಣಿ, ಪಕ್ಷಿಗಳ ಸಂಕುಲವಿದ್ದು, ವಿದೇಶಿ ಹಕ್ಕಿಗಳು ಜಿಲ್ಲೆಯ ಹಲವು ತಾಣಗಳಲ್ಲಿ ಕಾಣಿಸಿಕೊಂಡು ಪ್ರವಾಸಿಗರನ್ನು ಸೆಳೆಯುತ್ತವೆ. ಆದರೆ ಈ ಭಾರಿ ಜಿಲ್ಲೆಯಲ್ಲಿ ಆ ಹಕ್ಕಿಗಳ ಗೋಚರವಿಲ್ಲ. ಪಕ್ಷಿಗಳ ಕಲರವ ಕುಂಟಿತಗೊಂಡಿದೆ.
ನವೆಂಬರ್ನಿಂದ ಏಪ್ರಿಲ್ ತಿಂಗಳವರೆಗೆ ಕಾಫಿನಾಡಿಗೆ ವಿದೇಶದ ವಿವಿಧ ಜಾತಿಯ ಸಾವಿರಾರು ಪಕ್ಷಿಗಳು ಆಗಮಿಸುತ್ತಿದ್ದವು. ಈ ಬಾರಿ ಯಾವೊಂದು ಪಕ್ಷಿಗಳು ಜಿಲ್ಲೆಯತ್ತ ಮುಖ ಮಾಡಿಲ್ಲ. ಜಿಲ್ಲೆಯ ಕೆರೆ ಕಟ್ಟೆಗಳಲ್ಲಿ ಪಕ್ಷಿಗಳ ಸಂಖ್ಯೆ ವಿರಳವಾಗಿದೆ.
ಸ್ಪೋನ್ ಬಿಲ್, ಪಿಲಿಕಾನ್, ವಿಜಿಲಿಂಗ್ ಟೀಲ್, ಪೆಂಟೆಡ್ ಸ್ಟಾರ್ಕ್, ಬ್ಲಾಕ್ ಹೈಬೀಸ್, ವೈಟ್ ಹೈಬೀಸ್ ಸೇರಿದಂತೆ ಸಾವಿರಾರು ವಿದೇಶಿ ಹಕ್ಕಿಗಳು ಇಲ್ಲಿಗೆ ಬಂದು ಬದುಕುತ್ತಿದ್ದವು. ನಾಲ್ಕೈದು ತಿಂಗಳು ಇಲ್ಲಿ ಇದ್ದು ಮರಿ ಮಾಡಿಕೊಳ್ಳುತ್ತಿದ್ದವು. ಹಕ್ಕಿಗಳ ಫೆವರೀಟ್ ಆವಾಸ ಸ್ಥಾನವಾಗಿದ್ದ ಕಾಫಿನಾಡಿನ ಮಾಗಡಿ, ಕೋಟೆ, ಅಂಬಳೆ, ದಂಡರಮಕ್ಕಿ ಹಾಗೂ ಬೆಳವಾಡಿ ಕೆರೆಯಲ್ಲಿ ನೀರು ತುಂಬಿರುವುದರಿಂದ ಹಕ್ಕಿಗಳು ಬಂದಿಲ್ಲ.
ವಾತಾವರಣ ಬದಲಾದಂತೆ ಹಕ್ಕಿಗಳ ಸಂತಾನ ಕೂಡ ಕ್ರಮೇಣ ಕ್ಷೀಣಿಸುತ್ತದೆ. ಆಹಾರದ ಜೊತೆ ಸಂತಾನವನ್ನು ವೃದ್ಧಿಸಿಕೊಳ್ಳಲು ಸದಾ ತಂಪಿನ ವಾತಾವರಣದತ್ತ ವಿದೇಶಿ ಹಕ್ಕಿಗಳು ಮುಖ ಮಾಡ್ತಿದ್ವು. ಹತ್ತಾರು ವರ್ಷಗಳಿಂದ ಹಕ್ಕಿಗಳ ಓಡಾಟ ಕಡಿಮೆಯಾಗುತ್ತಿದ್ದು, ವಿದೇಶಿ ಅತಿಥಿಗಳ ಗೈರಿನಿಂದಾಗಿ ಪಕ್ಷಿ ಪ್ರೇಮಿಗಳಲ್ಲಿ ನಿರಾಸೆ ಮೂಡಿರುವುದಂತೂ ಸತ್ಯ.