ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದಿಂದ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ದತ್ತ ಜಯಂತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಇಂದಿನಿಂದ ಡಿಸೆಂಬರ್ 27ರವರೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಪ್ರವಾಸಿ ತಾಣಗಳನ್ನು ನೋಡ ಬರುತ್ತಿರುವ ಪ್ರವಾಸಿಗರನ್ನು ತಡೆದು ಕೈಮರ ಚೆಕ್ಪೋಸ್ಟ್ ಬಳಿ ವಾಪಸ್ ಕಳುಹಿಸಲಾಗುತ್ತಿದೆ. ಅಹಿತಕರ ಘಟನೆ ತಡೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
3 ದಿನ ದತ್ತ ಜಯಂತಿ: ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ, ದತ್ತ ಪೀಠದಲ್ಲಿ ಡಿಸೆಂಬರ್ 24, 25 ಮತ್ತು 26ರಂದು ದತ್ತ ಜಯಂತಿ ನಡೆಯಲಿರುವ ಹಿನ್ನೆಲೆಯಲ್ಲಿ ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. 6 ದಿನಗಳ ಕಾಲ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರ ಪ್ರವಾಸಿ ತಾಣಗಳಿಗೆ ಪ್ರವೇಶವಿರುವುದಿಲ್ಲ. ಡಿಸೆಂಬರ್ 26ಕ್ಕೆ 25 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ದತ್ತ ಪೀಠಕ್ಕೆ ಪ್ರವೇಶ ಮಾಡಲಿದ್ದಾರೆ.
ಪ್ರವಾಸಿಗರಿಗೆ ಮಾಹಿತಿ: ಡಿಸೆಂಬರ್ 23, 24 ವಾರಾಂತ್ಯ ಇದೆ. 25ರಂದು ಸೋಮವಾರ ಕ್ರಿಸ್ಮಸ್ ಪ್ರಯುಕ್ತ ಸಾರ್ವಜನಿಕ ರಜೆ ಇದೆ. ಹೀಗಾಗಿ ಈ ಸಂದರ್ಭದಲ್ಲಿ ಅನೇಕರು ಪ್ರವಾಸಕ್ಕೆ ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಈ ಮಾಹಿತಿಯನ್ನು ಜಿಲ್ಲಾಡಳಿತ ಪ್ರಕಟಿಸಿದೆ.
ಪೊಲೀಸ್ ಬಿಗಿಭದ್ರತೆ: ದತ್ತ ಜಯಂತಿಗೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು, ಸಾವಿರಾರು ಪೊಲೀಸ್ ಸಿಬ್ಬಂದಿಯಿಂದ ಚಿಕ್ಕಮಗಳೂರು ನಗರ ಖಾಕಿಮಯಗೊಳ್ಳಲಿದೆ. ಆರು ದಿನಕಾಲ ಪ್ರವಾಸಿಗರಿಗೆ ನಿರ್ಬಂಧವಿದ್ದು ಹೋಟೆಲ್, ರೆಸ್ಟೋರೆಂಟ್‌ಗಳು ವ್ಯಾಪಾರವಿಲ್ಲದೇ ಖಾಲಿ ಹೊಡೆಯಲಿವೆ. 24ರಂದು ಬೆಳಿಗ್ಗೆ 6ರಿಂದ 26ರ ಮಧ್ಯರಾತ್ರಿ ಡಿಸೆಂಬರ್ 12ರವರೆಗೆ ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಈ ನಡುವೆ ನಗರದ ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶಿಸಿದೆ. ಪ್ರಮುಖ ಬೀದಿಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಬದಲಿ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.
ಇದನ್ನೂಓದಿ: ಒಂದೇ ವರ್ಷದಲ್ಲಿ ಮಲೆ ಮಾದಪ್ಪನ ಬೆಟ್ಟಕ್ಕೆ 50 ಲಕ್ಷ ಭಕ್ತರ ಆಗಮನ: 63 ಕೋಟಿ ರೂ. ಆದಾಯ ಸಂಗ್ರಹ