ಚಿಕ್ಕಮಗಳೂರು: ನಾಡಹಬ್ಬ ದಸರಾವನ್ನು ರಾಜ್ಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಾಫಿನಾಡು ಚಿಕ್ಕಮಗಳೂರಿನಲ್ಲೂ ಕೂಡ ದಸರಾ ಹಬ್ಬವನ್ನ ವಿಶೇಷವಾಗಿ ಆಚರಿಸಲಾಗಿದೆ.
ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ದುರ್ಗಾದೇವಿಯ ಕಾರ್ಯಕ್ರಮದಲ್ಲಿ ಶಾಸಕ ಟಿ ಡಿ ರಾಜೇಗೌಡ ಭಾಗವಹಿಸಿ ವಿಭಿನ್ನವಾಗಿ ಅಂಬು ಹೊಡೆದಿದ್ದಾರೆ. ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆ ಹೊಂದಿರುವಂತಹ ವಿಶಿಷ್ಠವಾದ ಜಿಲ್ಲೆಯ ವಿವಿಧ ಭಾಗದಲ್ಲಿ ತಮ್ಮದೇ ಶೈಲಿಯಲ್ಲಿ ಅಂಬು ಹೊಡೆಯುತ್ತಾರೆ.
ಒಂದು ಕಡೆ ಕತ್ತಿಯಿಂದ ಅಂಬು ಕಡಿದರೆ, ಮತ್ತೊಂದು ಕಡೆ ಬಿಲ್ಲು ಬಾಣದಿಂದ ಹೊಡೆಯುತ್ತಾರೆ. ಮಲೆನಾಡಿನ ಭಾಗದಲ್ಲಿ ಬಂದೂಕಿನಿಂದ ಅಂಬು ಹೊಡೆಯುತ್ತಾರೆ. ಅದೇ ರೀತಿ ಬಾಳೆಹೊನ್ನೂರಿನ ದುರ್ಗಾದೇವಿಯ ಕಾರ್ಯಕ್ರಮದಲ್ಲಿ ಅಂಬು ಹೊಡೆಯುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ, ಕಾರ್ಯಕ್ರಮಕ್ಕೆ ಆಗಮಿಸಿದ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಬಂದೂಕಿನಿಂದ ಒಂದೇ ಗುಂಡಿನಲ್ಲಿ ಅಂಬು ಹಾಗೂ ತೆಂಗಿನ ಕಾಯಿಯನ್ನು ಹೊಡೆದಿದ್ದು, ನಂತರ ದುರ್ಗಾ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಬಾಳೆಹೊನ್ನೂರು ಮಂದಿ ಸಡಗರದಿಂದ ಈ ಹಬ್ಬದಲ್ಲಿ ಪಾಲ್ಗೊಂಡು ಹಬ್ಬವನ್ನು ಆಚರಿಸಿದ್ದಾರೆ.