ಚಿಕ್ಕಮಗಳೂರು : ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಿಲ್ಲ. ಬಿನ್ ಲಾಡೆನ್ ಬಂದರೆ ಕಾಂಗ್ರೆಸ್ನವರು ಒಳಗೆ ಬಿಟ್ಟು ಕೊಳ್ಳುತ್ತಾರೆ. ಆದರೆ, ಚಕ್ರವರ್ತಿ ಸೂಲಿಬೆಲೆ ಅವರ ವಿಚಾರಗೋಷ್ಠಿಯನ್ನು ರದ್ದು ಪಡಿಸುತ್ತಾರೆ, ಇವರು ಪ್ರಜಾ ಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಸೂಲಿಬೆಲೆ ಅವರನ್ನು ಸಚಿವ ಎಂ.ಬಿ.ಪಾಟೀಲ್ ಅವರು ಜೈಲಿಗೆ ಕಳಿಸುವ ಬೆದರಿಕೆ ಹಾಕಿರುವ ಬಗ್ಗೆ ಚಿಕ್ಕಮಗಳೂರು ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಸಿ ಟಿ ರವಿ, "ಇದನ್ನು ಅಘೋಷಿತ ತುರ್ತು ಪರಿಸ್ಥಿತಿ ಎಂದು ನಾನು ಕರೆಯಲು ಬಯಸುವುದಿಲ್ಲ. ಅತಿಯಾದ ಅಧಿಕಾರದ ಮಧ ಎಂದು ಕರೆಯಬಹುದು. ಅದು ಬಹಳ ದಿನ ಇರಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನೇ ಬುಡ ಮೇಲು ಮಾಡಿ ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿದ ಕಾಂಗ್ರೆಸ್ಗೆ ಜನರು ಹಿಂದೆ ಬುದ್ಧಿ ಕಲಿಸಿದ್ದನ್ನು ಇವರು ನೆನಪಿಟ್ಟು ಕೊಳ್ಳಬೇಕು. ಕಾಂಗ್ರೆಸ್ ಮಧ ಇಳಿಯಲು ಮತ್ತು ಇಳಿಸಲು ಬಹಳ ಕಾಲ ಬೇಕಾಗುವುದಿಲ್ಲ" ಎಂದರು.
ಗೋಹತ್ಯೆ ನಿಷೇಧ ಕಾನೂನು ರದ್ದು ಪಡಿಸುವ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. ಓಲೈಕೆ ಮತ್ತು ತುಷ್ಟೀಕರಣದ ರಾಜನೀತಿಯನ್ನೇ ಮಾಡಿಕೊಂಡು ಬಂದ ಕಾಂಗ್ರೆಸ್ ಪಕ್ಷದಿಂದ ಹೊಸದೇನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ದೇಶಕ್ಕೆ ಸಂವಿಧಾನ, ಕಾನೂನು ಇದೆ. ಇಲ್ಲದ್ದೆಲ್ಲ ಮಾಡಲು ಹೋದರೆ ಬುದ್ಧಿ ಕಲಿಸಲು ಜನರೂ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ದೇಶಕ್ಕೆ ಒಂದು ಸಂಸ್ಕೃತಿ ಇದೆ. ಎಲ್ಲವನ್ನೂ ಭಗವಂತನ ಸ್ವರೂಪಿಯಾಗಿ ಸ್ಮರಿಸುವುದು, ಮಣ್ಣನ್ನೂ ಕೂಡ ತಾಯಿ ಎಂದು ಕರೆಯುವುದು ನಮ್ಮ ಸಂಸ್ಕೃತಿಯಲ್ಲಿ ಮಾತ್ರ. ಎಷ್ಟೋ ಮನೆಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಭೂಮಿಗೆ ನಮಸ್ಕಾರ ಮಾಡಿ ನಂತರ ಮುಂದೆ ಹೆಜ್ಜೆ ಇಡುತ್ತಾರೆ. ನೀರನ್ನು ಗಂಗಾ ಮಾತೆ ಎಂದು, ಗೋವನ್ನು ಗೋಮಾತೆ ಎಂದು ಕರೆಯುವುದು ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ. ಇದಕ್ಕೆ ಕಾರಣ ಇದರ ಹಿಂದಿರುವ ಉದಾತ್ತವಾದ ನಾಗರಿಕತೆ ಎಂದು ಹೇಳಿದರು.
ಇದನ್ನೂ ಓದಿ : ಕೇಸರಿ ಬಣ್ಣಕ್ಕೆ ಹಿಂದುತ್ವದ ಛಾಯೆ ಕೊಡುವುದು ಕೆಟ್ಟದು: ಚಕ್ರವರ್ತಿ ಸೂಲಿಬೆಲೆ
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಹೇಳಿದ್ದೇನು? : ಜೂನ್ 4ರಂದು ವಿಜಯಪುರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ಕಾಂಗ್ರೆಸ್ ಸರ್ಕಾರವನ್ನು ಹಿಟ್ಲರ್ ಸರ್ಕಾರಕ್ಕೆ ಹೋಲಿಸಿದ್ದ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಪ್ರತಿಕ್ರಿಯೆ ನೀಡಿದ್ದರು. ಹಿಂದೆ ನಾಲ್ಕು ವರ್ಷ ಸೂಲಿಬೆಲೆ ಏನ್ ಮಾಡಿದ್ದಾರೆ ಎಂದು ತಿಳಿದಿದೆ. ಅವರು ಮಾಡಿದ ಅನಾಹುತಗಳನ್ನು ನಾವು ಸರಿಪಡಿಸುತ್ತಿದ್ದೇವೆ. ಅಲ್ಲದೇ, ಪಠ್ಯಪುಸ್ತಕ, ಹಿಜಾಬ್, ಹಲಾಲ್, ಆಜಾನ್ ಅಂತ ಹೇಳಿ ನಾಟಕ ಮಾಡಿದ್ದಾರೆ. ಇನ್ಮುಂದೆ ಇಂತಹ ನಾಟಕ ಮಾಡಿದ್ರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಸೂಲಿಬೆಲೆಗೆ ಎಚ್ಚರಿಕೆ ಕೊಟ್ಟಿದ್ದರು.
ಇದನ್ನೂ ಓದಿ : ನಾಟಕ ಮಾಡಿದ್ರೆ ಜೈಲು ಕಂಬಿ ಎಣಿಸಬೇಕಾಗುತ್ತದೆ: ಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂ.ಬಿ ಪಾಟೀಲ್ ಖಡಕ್ ವಾರ್ನಿಂಗ್