ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಬರೋಬ್ಬರಿ 3000 ಅಡಿ ಎತ್ತರದಲ್ಲಿರುವ ಬಿಂಡಿಗ ದೇವಿರಮ್ಮ ಎಂಬ ಸುಪ್ರಸಿದ್ಧ ದೇವಾಲಯವಿದೆ. ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಈ ದೇವಿಯನ್ನು ನೋಡಲು ರಾಜ್ಯ ಸೇರಿದಂತೆ ಹಲವೆಡೆಯಿಂದ ಸಾಕಷ್ಟು ಭಕ್ತಗಣ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಹಾಗೆಯೇ ಹರಕೆ ಹೊತ್ತವರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆಯುವುದು ಸಾಮಾನ್ಯ. ಅದರಂತೆ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಟುಂಬ ಸಮೇತರಾಗಿ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಬೆಟ್ಟದ ವೈಶಿಷ್ಟ್ಯತೆ:
ದೇವಿಯ ದರ್ಶನ ಮಾಡಲು ಬರುವ ಭಕ್ತರು ಸುಮಾರು 6 ಕಿ.ಮೀ. ದೂರವನ್ನು ಕ್ರಮಿಸಲೇಬೇಕು. ಬೆಟ್ಟ-ಗುಡ್ಡಗಳ ಸಾಲಿನಲ್ಲಿ ಮಂಜಿನ ಹನಿಗಳ ನಡುವೆ ಬರಿಗಾಲಿನಲ್ಲಿಯೇ ಕಲ್ಲು ಮುಳ್ಳಿನ ದುರ್ಗಮ ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೆ. ಇನ್ನು ಬೆಟ್ಟ ಏರುವವರು ಬೆಳಗ್ಗೆ 3 ಗಂಟೆಯಿಂದಲೇ ತಮ್ಮ ಪಾದಯಾತ್ರೆ ಆರಂಭಿಸುವುದು ಇಲ್ಲಿನ ರೂಢಿ. ಬೆಟ್ಟ ತುಂಬಾ ಎತ್ತರದಲ್ಲಿರುವುದರಿಂದ ಆಯಾಸ ಆಗುವುದು ಸಾಮಾನ್ಯ. ಆದರೆ ಬೆಟ್ಟ ಏರಿ ದೇವಿಯ ದರ್ಶನ ಪಡೆದರೆ ಸಾಕು ಅಲ್ಲಿಯ ವಾತಾವರಣ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿಬಿಡುತ್ತದೆ.
ದರ್ಶನ:
ಹಾಗೇ ಪ್ರತಿ ವರ್ಷ ಈ ಕ್ಷೇತ್ರಕ್ಕೆ 75 ಸಾವಿರದಿಂದ 1 ಲಕ್ಷದವರೆಗೂ ಭಕ್ತರು ಬಂದು ದರ್ಶನ ಮಾಡಿಕೊಂಡು ಹೋಗುತ್ತಾರೆ. ಆದ್ರೆ ಈ ವರ್ಷ ಕೊರೊನಾ ಹಿನ್ನೆಲೆ ಜಿಲ್ಲಾಡಳಿತವು ಬೆಟ್ಟವೇರಲು ಹೊರಗಡೆಯಿಂದ ಬರುವ ಭಕ್ತರಿಗೆ ನಿರ್ಬಂಧ ಹೇರಿತ್ತು. ಕೇವಲ ಅಕ್ಕ-ಪಕ್ಕದ ಗ್ರಾಮಸ್ಥರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಆದರೂ ದೇವಿಯ ದರ್ಶನ ಮಾಡಬೇಕೆಂದು ಸಾವಿರಾರು ಜನರು ಪೊಲೀಸರ ಕಣ್ಣು ತಪ್ಪಿಸಿ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಕೊರೆಯುವ ಚಳಿಯ ನಡುವೆ, ಜಾರುವ ಗುಡ್ಡವನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ದೇವಿಯ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.
ಬರಿಗಾಲಲ್ಲಿ ಬೆಟ್ಟವೇರಿದ ಸಿ.ಟಿ.ರವಿ:
ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬರಿಗಾಲಲ್ಲಿ ಬೆಟ್ಟವೇರಿ ದೇವಿಯ ದರ್ಶನ ಮಾಡೋದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಿಸ್ ಮಾಡಿಕೊಳ್ಳಲಿಲ್ಲ. ಪತ್ನಿ ಪಲ್ಲವಿ ಜೊತೆ ಬೆಟ್ಟವೇರಿ ದೇವಿರಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.