ಚಿಕ್ಕಮಗಳೂರು: ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಜಾಮೀನು ಇಲ್ಲದೇ 10 ಸಾವಿರ ರೂ. ವರೆಗೂ ಸಾಲ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.
ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಅಡುಗೆ ಸಹಾಯಕರು ಹಾಗೂ ಸಿಬ್ಬಂದಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಜನರು ಭಯಪಡುವುದು ಬೇಡ. ವೈಯಕ್ತಿಕ ಸ್ವಚ್ಛತೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು. ಅದೃಷ್ಟವಶಾತ್ ನಮ್ಮ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ. ಈ ಬಗ್ಗೆ ಮೈಮರೆಯುವುದು ಬೇಡ. ದೇಶದಲ್ಲಿ ಶೇ. 100 ಜನ ಸೋಂಕಿತರಲ್ಲಿ 3 ಜನ ಸಾವನ್ನಪ್ಪಿದರೆ ಉಳಿದ 97 ಜನ ಗುಣ ಮುಖರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಶೇ. 60 ರಷ್ಟು ಜನರು ಯಾವುದೇ ಔಷಧಿ ಇಲ್ಲದೆಯೂ ಗುಣ ಮುಖರಾಗಿದ್ದಾರೆ ಎಂದರು.
ಲಾಕ್ ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಜನತೆಗೆ ಕೇಂದ್ರ ಸರ್ಕಾರ ಆರಂಭದಲ್ಲಿ 1 ಲಕ್ಷ 70 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಪ್ರತಿ ಬಡ ಕುಟುಂಬಗಳಿಗೆ 10 ಕೆ.ಜಿ. ಅಕ್ಕಿ, 2 ಕೆ.ಜಿ ಬೇಳೆ ನೀಡಿತ್ತು. ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ್, ಜನ್ ಧನ್ ಖಾತೆಗೆ ಹಣ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 2 ಸಾವಿರ ರೂ. ನೀಡಿತ್ತು. ಜೊತೆಗೆ ರಾಜ್ಯ ಸರ್ಕಾರ 10 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ ವಿತರಣೆ ಮಾಡಿತ್ತು. ಇದೀಗ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೂ ಯಾವುದೇ ಜಾಮೀನು ಇಲ್ಲದೇ 10 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತದೆ ಎಂದು ತಿಳಿಸಿದರು.