ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲೂಕಿನ ಕೆ ದಾಸರಹಳ್ಳಿಯಲ್ಲಿ ನಿನ್ನೆ ಪತ್ತೆಯಾದ ಎಸ್ಎಸ್ಎಲ್ಸಿ ವಿದ್ಯಾರ್ಥಿಯ ಕೊರೊನಾ ಪ್ರಕರಣ ಚಿಕ್ಕಮಗಳೂರಿನ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ಬಾಲಕನ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 55 ಜನರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಈ ವಿದ್ಯಾರ್ಥಿ ತರೀಕೆರೆ ಹಾಗೂ ಶಿವಮೊಗ್ಗದಲ್ಲಿ ಓಡಾಡಿದ್ದಾನೆ ಎಂಬ ಮಾಹಿತಿಯನ್ನ ಜಿಲ್ಲಾಡಳಿತ ಬಿಚ್ಚಿಟ್ಟಿದೆ.
ಶಿವಮೊಗ್ಗ ಆಸ್ಪತ್ರೆಗೆ ಹೋದಾಗ ಕೊರೊನಾ ಪರೀಕ್ಷೆಯನ್ನು ಈ ವಿದ್ಯಾರ್ಥಿಗೆ ಮಾಡಲಾಗಿತ್ತು. ಆ ವೇಳೆ ಈ ವಿದ್ಯಾರ್ಥಿಗೆ ಸೋಂಕು ಪತ್ತೆಯಾಗಿದೆ. ಐಎಲ್ಐ ಲಕ್ಷಣ ಇದ್ದ ಕಾರಣ ಬಾಲಕ ಆಸ್ವತ್ರೆಗೆ ಹೋಗಿದ್ದನು. ಈಗ ಕೋವಿಡ್-19 ಆಸ್ವತ್ರೆಗೆ ಈ ವಿದ್ಯಾರ್ಥಿಯನ್ನು ದಾಖಲು ಮಾಡಲಾಗಿದೆ. ಈ ವಿದ್ಯಾರ್ಥಿಗೆ ಜಿಲ್ಲಾಡಳಿತ ಪರೀಕ್ಷೆಗೆ ಬೇಕಾದ ಪುಸ್ತಕಗಳನ್ನು ಒದಗಿಸಿದೆ.
ಸೈಕಾಲಾಜಿಕಲ್ ಕೌನ್ಸೆಲಿಂಗ್ ಕೂಡ ಮಾಡಲಾಗಿದೆ. ಕಡೂರು ತಾಲೂಕಿನ ಕೆದಾಸರಹಳ್ಳಿ ಗ್ರಾಮವನ್ನ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ವಿದ್ಯಾರ್ಥಿ ಜೊತೆಗಿನ ಸ್ನೇಹಿತರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನೂ ಒದಗಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದ್ದಾರೆ.