ಚಿಕ್ಕಮಗಳೂರು : ಗ್ರೀನ್ ಝೋನ್ನಲ್ಲಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ, ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಪ್ರತಿ ನಿತ್ಯ ಚಿಕ್ಕಮಗಳೂರು ಜಿಲ್ಲೆಯಿಂದ ಶಿವಮೊಗ್ಗಕ್ಕೆ, ಶಿವಮೊಗ್ಗ ಜಿಲ್ಲೆಯಿಂದ ಚಿಕ್ಕಮಗಳೂರಿಗೆ ನೂರಾರು ಜನರು ಓಡಾಡುತ್ತಾರೆ. ಅಲ್ಲದೆ ಅಕ್ಕಪಕ್ಕದ ಜಿಲ್ಲೆಯಾದ, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಈ ವೈರಸ್ ಪತ್ತೆಯಾಗಿದ್ದು, ಚಿಕ್ಕಮಗಳೂರು ಜನರು ಭಯದಿಂದಲೇ ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗುವಂತಾಗಿದೆ.
ಈಗಾಗಲೇ ಪಾಸ್ ಪಡೆದು ಅಂತರ್ ಜಿಲ್ಲೆಗಳ ಸಂಚಾರಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇನ್ನೊಂದು ಕಡೆ ಚಿಕ್ಕಮಗಳೂರು ಜಿಲ್ಲೆಗೆ ಬರುವಂತಹ ಅಂತರ್ ಜಿಲ್ಲೆಯ ಜನರಿಗೆ ಯಾವುದೇ ರೀತಿಯ ಕ್ವಾರಂಟೈನ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿಲ್ಲ. ನಗರದಲ್ಲಿ, ಲಾಕ್ ಡೌನ್ ಸಡಿಲಿಕೆ ಮಾಡಿದ್ದು ಜನ ಜೀವನ ಸಹಜ ಸ್ಥಿತಿಯಲ್ಲಿ ನಡೆಯುತ್ತಿದೆ. ಆದರೆ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಈ ವೈರಸ್ ಪತ್ತೆಯಾಗಿರುವ ಕಾರಣ, ಮುಂದಿನ ದಿನಗಳಲ್ಲಿ ತಮ್ಮ ಜಿಲ್ಲೆಗೂ ಈ ವೈರಸ್ ಕಾಲಿಡುತ್ತಾ ಎಂಬ ಭಯ ಇಲ್ಲಿನ ಜನರಲ್ಲಿ ಕಾಡಲು ಪ್ರಾರಂಭವಾಗಿದೆ.
ಇಷ್ಟುದಿನ ಕೊರೊನಾ ಮಹಾಮಾರಿ ಜಿಲ್ಲೆಗೆ ಬರದಂತೆ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಹಗಲು ರಾತ್ರಿ ದುಡಿದು ಹಸಿರು ವಲಯವನ್ನಾಗಿ ಉಳಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಜಿಲ್ಲೆಗೆ ವೈರಸ್ ಕಾಲಿಡದಂತೆ ಜಿಲ್ಲಾಡಳಿತ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.