ಚಿಕ್ಕಮಗಳೂರು: ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದು, ಸಿ.ಟಿ.ರವಿ ನಿಮಗೆಲ್ಲಾ ಗೊತ್ತು, ಆದ್ರೆ ದಿಶಾ ರವಿ ಹೆಸರು ಯಾರಿಗೆ ಗೊತ್ತಿತ್ತು ಹೇಳಿ ಎಂದಿದ್ದಾರೆ.
ಅರಾಜಕತೆ ಹುಟ್ಟಿ ಹಾಕುವುದು ಪ್ರಜಾಪ್ರಭುತ್ವದ ಲಕ್ಷಣನಾ?, ದಿಶಾ ರವಿ ಬೆಂಬಲಿಸುವ ಕಾಂಗ್ರೆಸ್ನವರಿಗೆ ನಾಚಿಕೆಯಾಗಬೇಕು. ಪ್ರಜಾಪ್ರಭುತ್ವ ಹೋರಾಟಕ್ಕಾಗಿ ಅವಳ ಬಂಧನವಾಗಿಲ್ಲ. ಅರಾಜಕತೆ ಸೃಷ್ಟಿ ಮಾಡಿದ್ದಕ್ಕಾಗಿ ಆಕೆಯಾ ಬಂಧನವಾಗಿದೆ ಎಂದರು.
ಓದಿ: ದಿಶಾ ರವಿ ಬಂಧನ ಭಾರತದ ಯುವಕರ ನೈತಿಕ ಬಲ ದುರ್ಬಲಗೊಳಿಸುವ ಸೂಚನೆ..? : ಡಿಕೆಶಿ
ದಿಶಾ ರವಿ ಬಗ್ಗೆ ತನಿಖೆಯಾಗ್ತಿದೆ. ಪ್ರಾರ್ಥಮಿಕ ವರದಿಯಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ ಎಂಬುದು ದೃಢವಾದ ಹಿನ್ನೆಲೆ ಬಂಧನವಾಗಿದೆ. ನಮಗೆ ನಮ್ಮ ದೇಶದ ಸಂವಿಧಾನ ದೊಡ್ಡದು, ದೇಶದ ಅಖಂಡತೆ ದೊಡ್ಡದು. ಇಂತಹ ಕೃತ್ಯ ಬೆಂಬಲಿಸಿ ಕಾಂಗ್ರೆಸ್ ತನ್ನ ನಾಯಕರನ್ನ ಕಳೆದುಕೊಂಡಿದೆ. ಅಂತಹದ್ದೇ ಪರಿಸ್ಥಿತಿ ತಂದಿಡುವ ಹೀನ ಕೆಲಸ ಕಾಂಗ್ರೆಸ್ ಮಾಡಬಾರದು. ದೇಶದ ಅಖಂಡತೆಗೆ ಭಂಗ ತರುವ ಯಾವ ಶಕ್ತಿಯನ್ನು ಬೆಂಬಲಿಸಲ್ಲ, ಕ್ಷಮಿಸಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.
ಸಚಿವ ಉಮೇಶ್ ಕತ್ತಿ ಹೇಳಿಕೆ ಸಮರ್ಥಿಸಿಕೊಂಡ ಸಿಟಿ ರವಿ:
ಬೈಕ್, ಫ್ರಿಡ್ಜ್, ಟಿವಿ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಎಂದಿದ್ದ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿ ಟಿ ರವಿ, ಇದು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ತೆಗೆದುಕೊಂಡಿದ್ದ ನಿಲುವು. ಈ ನಿಯಮದ ಪುನರುಚ್ಚಾರವನ್ನು ಈಗಿನ ಸಚಿವರು ಹೇಳಿದ್ದಾರೆ. ಆಗ ನಿಯಮ ಮಾಡಬೇಕಾದ್ರೆ ಕಾಂಗ್ರೆಸ್ನವರು ಅರೆ ಪ್ರಜ್ಞಾವಸ್ಥೆಯಲ್ಲಿದ್ರಾ..? ಈಗ ಅರೆ ಪ್ರಜ್ಞಾವಸ್ಥೆಯಿಂದ ಕಾಂಗ್ರೆಸ್ನವರು ಹೊರ ಬಂದಿದ್ದಾರೆ ಎಂದರು.
ನಂತರ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡುವ ವಿಚಾರ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ - ಡಿಕೆಶಿ ನಡುವೆ ಮುಸುಕಿನ ಗುದ್ದಾಟವಿದೆ. ಬಹುಶಃ ಗುದ್ದಾಟದ ಕಾರಣಕ್ಕೆ ದೆಹಲಿಗೆ ಭೇಟಿ ಕೊಡ್ತಿರಬಹುದು. ನಾವು ಸಿದ್ದರಾಮಯ್ಯ ಪರ ಅಲ್ಲ, ಡಿಕೆಶಿ ಪರನೂ ಅಲ್ಲ. ನಾವು ಕಾಂಗ್ರೆಸ್ ವಿರುದ್ಧ, ಅವರೇನು ಮಾಡಿದ್ರೂ ನಮಗೆ ಸಂಬಂಧವಿಲ್ಲ ಎಂದರು.