ಚಿಕ್ಕಮಗಳೂರು : ಸಿ ಟಿ ರವಿ ಗೆದ್ದೇ ಗೆಲ್ತಾರೆ ಅಂತ ಹೇಳಿದ್ದ ಕಾಂಗ್ರೆಸ್ ಪಕ್ಷದ ಮುಖಂಡನನ್ನು ಹುದ್ದೆಯಿಂದ ವಜಾ ಮಾಡಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ರಸೂಲ್ ಖಾನ್ ವಜಾಗೊಂಡಿರುವ ನಾಯಕ. ಇವರನ್ನು ವಜಾಗೊಳಿಸಿ ಕಿಸಾನ್ ಸೆಲ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಈ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಈ ಬಾರಿ ಹೇಗಿದ್ರು ಸಿಟಿ ರವಿನೇ ಗೆಲ್ಲೋದು ಸರ್ ಎಂದು ಕಾಂಗ್ರೆಸ್ ಮುಖಂಡ ರಸೂಲ್ ಖಾನ್ ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹೇಳಿಕೆಯಿಂದಾಗಿ ಪಕ್ಷಕ್ಕೆ ಮುಜುಗರ ತರುವ ನಡವಳಿಕೆಯಿಂದ ರಸೂಲ್ ಖಾನ್ ಅವರನ್ನು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಅಮಾನತು ಮಾಡಿ ಸಚಿನ್ ಮೀಗಾ ಆದೇಶ ಹೊರಡಿಸಿದ್ದಾರೆ.
ಈ ಕ್ಷೇತ್ರದಲ್ಲಿ ನಿರಂತರವಾಗಿ ಪ್ರತಿಭಟನೆ ಮಾಡುತ್ತಾ, ಸಾರ್ವಜನಿಕವಾಗಿ ಪ್ರತಿಯೊಂದು ಸಮುದಾಯದಲ್ಲೂ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೀನಿ. ಅತಿ ಹೆಚ್ಚಾಗಿ ಶಾಸಕ ಸಿ ಟಿ ರವಿ ಅವರನ್ನು ವಿರೋಧಿಸುತ್ತಾ ಬಂದಿದ್ದೇವೆ. ಇದಕ್ಕೆ ಸಿಕ್ಕ ಪ್ರತಿಫಲ ಸುಮಾರು 7 ಕೇಸ್ ನಮ್ಮ ಮೇಲೆ ದಾಖಲಾಗಿವೆ. ಈಗಲೂ ನಾನು ಕೋರ್ಟ್ ಸುತ್ತ ಸುತ್ತುತ್ತಿದ್ದೇನೆ ಎಂದು ರಸೂಲ್ ಹೇಳಿದ್ದಾರೆ.
ಬೇಸರದ ವಿಚಾರವಾಗಿ ನಾನು ಮಾತನಾಡಿದ್ದು ನಿಜ.. ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳು.. ನಮಗೂ ಅಧಿಕಾರದ ಆಸೆ ಇದೆ.. ನಾವೇ ಇಲ್ಲಿ ಗೆಲ್ಲಬೇಕು.. ಸಿ ಟಿ ರವಿ ಸೋಲಿಸಬೇಕು ಅಂತ ಇಷ್ಟು ವರ್ಷದಿಂದ ಕಷ್ಟ ಪಟ್ಟಿದ್ದೇವೆ. ಆದರೆ ಯಾರೋ ಹೊರಗಡೆಯಿಂದ ಬಂದವರಿಗೆ ಗಲಾಟೆ ಮಾಡಿಕೊಂಡು ಇದ್ದರೆ ಅದಕ್ಕಾಗಿ ನಮಗೆ ಬೇಸರ ಆಗಿತ್ತು. ಬೇಸರದ ವಿಚಾರವಾಗಿ ನಾನು ಮಾತನಾಡಿದ್ದು ನಿಜ ಎಂದು ರಸೂಲ್ ತಿಳಿಸಿದ್ದಾರೆ.
ನಾನು ಮಾತನಾಡಿದ್ದು, ಸಿ ಟಿ ರವಿ ಪ್ರತಿಶತ 100ರಷ್ಟು ಸೋಲ್ತಾರೆ.. ಆದ್ರೆ ನಮ್ಮ ಒಳ ಜಗಳಕ್ಕೆ, ಕಾರ್ಯಕರ್ತರ ಕಡೆಗಣನೆಗೆ, ನಾಯಕರ ಕಡೆಗಣನೆಯಿಂದಾಗಿ ನಾಳೆ ದಿನ ಸಿ ಟಿ ರವಿ ಗೆಲ್ಲೋ ಚಾನ್ಸ್ ಇದೆ. ಅದಕ್ಕೆ ನಾವು ಚಾನ್ಸ್ ಕೊಡಬಾರದು ಅಂತ ಹೇಳಿದ್ದೆ. ಆದ್ರೆ ಇದನ್ನು ತಿರುಚಿ ಬೇರೆ ರೀತಿ ಬಿಂಬಿಸಿದ್ದಾರೆ ಎಂದು ರಸೂಲ್ ಹೇಳಿದ್ದಾರೆ.
ಎಸ್ಡಿಪಿಐ ವಿಚಾರವಾಗಿ ಮಾತನಾಡಿದ ಅವರು, ನೀವು ಅಭ್ಯರ್ಥಿ ಹಾಕಿ, ಹಾಕಿದ ಮೇಲೆ ಯಾವ ರೀತಿ ಸೋಲು ಅನುಭವಿಸುತ್ತೀರಾ, ಯಾವ ರೀತಿ ಪಾಠ ಕಲಿಯುತ್ತೀರಾ ಅಂತಾ ಹೇಳಿರೋದು ನಿಜ ಎಂದು ರಸೂಲ್ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ರಾಜ್ಯ ಅಧ್ಯಕ್ಷರು ಇದನ್ನ ಪರೀಶಿಲನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜಕೀಯ ರಣರಂಗ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ರಾಜಕೀಯ ಬದಲಾವಣೆಗಳು ಹಾಗೂ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಓದಿ: ಕೋಮುದ್ವೇಷ ಭಾಷಣ ಆರೋಪ: ಸಚಿವ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು