ಚಿಕ್ಕಮಗಳೂರು : ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಯಾವ ಅಮಾಯಕನ ಬಂಧನ ಆಗಿಲ್ಲ. ಸಾಕ್ಷಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ವಿರೋಧ ಪಕ್ಷಗಳು ಟೀಕೆ ಮಾಡುವುದು ಸಾಮಾನ್ಯ. ಆದರೆ, ಜನರು ಏನು ಹೇಳುತ್ತಾರೆಂಬುದು ಮುಖ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಶೃಂಗೇರಿ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಮುಖ್ಯಮಂತ್ರಿಯಾದ ಮೇಲೆ ಚಿಕ್ಕಮಗಳೂರಿಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದೇನೆ. ಈ ಹಿಂದೆ ಎರಡು ಬಾರಿ ಕಾರ್ಯಕ್ರಮ ಫಿಕ್ಸ್ ಆಗಿ ನಂತರ ಬರಲಾಗಿರಲಿಲ್ಲ. ಈ ಬಾರಿ ಶ್ರೀ ಶಾರದಾಂಬೆಯ ದರ್ಶನ ಮಾಡಲು ಶೃಂಗೇರಿಗೆ ಬಂದಿದ್ದೇನೆ. ನಾಡಿನ ಸುಭೀಕ್ಷೆಗಾಗಿ ಶಾರದಾಂಬೆಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ವಿಷಯಕ್ಕೂ ಮೊದಲು ರಾಜ್ಯದ ಅಭಿವೃದ್ಧಿ ಕೆಲಸಕ್ಕೆ ಪ್ರಾಮುಖ್ಯತೆ: ಸಿಎಂ ಬೊಮ್ಮಾಯಿ
ನಾನು ಯಾವುದರಲ್ಲೂ ಸಾಫ್ಟ್ ಕಾರ್ನರ್ ತೋರಿಲ್ಲ. ಖಡಕ್ ಅಂದರೆ ಏನು ಎಂದು ಸಿಎಂ ಪ್ರಶ್ನಿಸಿದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಸಂಬಂಧ ತಕ್ಷಣವೇ ಎಫ್‌ಐಆರ್ ಮಾಡಿ ಕೆಲಸ ಮಾಡುತ್ತಿದ್ದೇವೆ. ಹುಬ್ಬಳ್ಳಿ ಘಟನೆಗೂ ಕ್ರಮ ತೆಗೆದುಕೊಂಡಿದ್ದೇವೆ. ಶಿವಮೊಗ್ಗ ಕೇಸ್‌ನಲ್ಲೂ ಕ್ರಮ ತೆಗೆದುಕೊಂಡಿದ್ದೇವೆ.
ಕಲ್ಲಂಗಡಿ ಹಣ್ಣಿನ ಅಂಗಡಿ ವಿಚಾರದಲ್ಲೂ ಕ್ರಮ ತೆಗೆದುಕೊಂಡಿದ್ದೇವೆ. ಯಾವುದರಲ್ಲೂ ವಿಳಂಬ ಮಾಡಿಲ್ಲ. ಪೊಲೀಸ್ ಕೇಸ್ಲ್ಲೂ ನಾವೇ ಕ್ರಮ ತೆಗೆದುಕೊಂಡಿದ್ದೇವೆ. ಇದಕ್ಕಿಂತ ಬೇರೆ ಇನ್ನೇನು ಬೇಕು ನಿಮಗೆ ಎಂದು ವಿರೋಧ ಪಕ್ಷಗಳಿಗೆ ಪ್ರಶ್ನಿಸಿದರು.