ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆರ್ಟಿಪಿಸಿಆರ್ ವೈರಾಲಜಿ ಲ್ಯಾಬ್ ಅನ್ನು ಆಗಸ್ಟ್ 1 ರಿಂದ ಪ್ರಾರಂಭಿಸಲಾಗಿದ್ದು, ಈವರೆಗೆ 50 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ.
ಈ ಪರೀಕ್ಷೆಗಳಿಗೆ ಬೇಕಾಗಿರುವ ಆರ್ಟಿಪಿಸಿಆರ್ ಕಿಟ್‌ಗಳನ್ನು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರಯೋಗಾಲಯದಿಂದ ಪಡೆಯಲಾಗುತ್ತಿದೆ. ನವೆಂಬರ್ 5ರ ಅಂತ್ಯಕ್ಕೆ 50,562 ಟೆಸ್ಟ್‌ಗಳನ್ನು ಮಾಡಲಾಗಿದ್ದು, ಅವುಗಳಲ್ಲಿ 4,687 ಪಾಸಿಟಿವ್ ಫಲಿತಾಂಶ, 307 ಇನ್‌ಕನ್‌ಕ್ಲ್ಯೂಸಿವ್ ಮತ್ತು 45,568 ನೆಗೆಟಿವ್ ಫಲಿತಾಂಶ ಬಂದಿದೆ.
ಈ ಪ್ರಯೋಗಾಲಯದಲ್ಲಿ ಇಬ್ಬರು ಮೈಕ್ರೋಬಯಾಲಜಿಸ್ಟ್, ಒಬ್ಬರು ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಂತ್ರಜ್ಞ, 11 ಕಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಂತ್ರಜ್ಞರು, 4 ಡೇಟಾ ಎಂಟ್ರಿ ಆಪರೇಟರ್‌ಗಳು ಸೇರಿದಂತೆ ಒಟ್ಟು 18 ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಆಸ್ಪತ್ರೆಯ ವೈದ್ಯರು ಹಾಗೂ ಪ್ರಯೋಗ ಶಾಲಾ ಟೆಕ್ನಾಲಜಿಸ್ಟ್ ಹಾಸನ ಮೆಡಿಕಲ್ ಕಾಲೇಜು ಹಾಗೂ ನಿಮ್ಹಾನ್ಸ್ ನಲ್ಲಿ ತರಬೇತಿ ಪಡೆದಿದ್ದಾರೆ.
ಹಾಸನದ ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶರತ್ ಕುಮಾರ್ ಶೆಟ್ಟಿ ಇವರನ್ನು ಈ ಪ್ರಯೋಗಾಲಯಕ್ಕೆ ನಿಯೋಜಿಸಿದ್ದು, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಡಾ. ವಿಶ್ವಜಿತ್ ಕ್ರೋಬಯಾಲಜಿಸ್ಟ್ ಇವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಲ್ಯಾಬ್‌ನ ಕಾರ್ಯಕ್ಷಮತೆ ಹೆಚ್ಚಿಸಲು ಆಟೋಮೇಟೆಡ್ ಆರ್ಎನ್ಎ ಎಕ್ಟ್ರಾಕ್ಟರ್ ಮತ್ತು 93 ವೆಲ್ಸ್ ಆರ್ಟಿಪಿಸಿಆರ್ ಕಿಟ್ ಅನ್ನು ಹೆಚ್ಚುವರಿಯಾಗಿ ಬೆಂಗಳೂರಿನ ಕರ್ನಾಟಕ ರಾಜ್ಯ ಡ್ರಗ್ಸ್ ಅಂಡ್ ಲಾಜಿಸ್ಟಿಕ್ ಸೊಸೈಟಿ ಸರಬರಾಜು ಮಾಡುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಸ್ಥಾಪಿತವಾಗಿರುವ ಆರ್ಟಿಪಿಸಿಆರ್ ಲ್ಯಾಬ್‌ನಲ್ಲಿ ದಿನವೊಂದಕ್ಕೆ 1200 ಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಬಹುದಾಗಿದೆ. ತ್ವರಿತವಾಗಿ ಫಲಿತಾಂಶ ದೊರೆಯುತ್ತಿದ್ದು, ರೋಗಿಗಳ ಪತ್ತೆ ಮತ್ತು ಚಿಕಿತ್ಸೆ ಹಾಗೂ ರೋಗ ಹರಡದಂತೆ ಮುಂಜಾಗ್ರತೆ ವಹಿಸಲು ಸಹಕಾರಿಯಾಗಲಿದೆ. ಪ್ರಯೋಗಾಲಯ ಸ್ಥಾಪನೆಗೆ ಸಿವಿಲ್ ಕಾಮಗಾರಿಗಳಿಗಾಗಿ 25 ಲಕ್ಷ ಹಾಗೂ ಉಪಕರಣಗಳು ಮತ್ತು ಕನ್ಸ್ಯೂಮಬಲ್ಸ್ ರೂ. 123.62 ಲಕ್ಷ ಒಟ್ಟು 148.62 ಲಕ್ಷಗಳ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದ್ದು, ಸಿವಿಲ್ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದವರು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.