ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ತಲಗೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಮನೆ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರು ಸಾವಿಗೀಡಾಗಿರುವ ಘಟನೆ ನಡೆದಿತ್ತು. ದುರಂತ ಸಂಭವಿಸುವ ಮುನ್ನವೇ ಮಹಿಳೆಯರು ಮರ ತೆರವಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದ ವಿಡಿಯೋ ವೈರಲ್ ಆಗಿದೆ.
ಈ ಘಟನೆಯಲ್ಲಿ ಚಂದ್ರಮ್ಮ ಹಾಗೂ ಸರಿತಾ ಎಂಬಿಬ್ಬರು ಮೃತಪಟ್ಟರೆ, ಸರಿತಾ ಅವರ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು. ಮಳೆಗಾಲದಲ್ಲಿ ಮರ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಹಿಳೆಯರು ಅದನ್ನು ತೆರವು ಮಾಡುವಂತೆ ಆಗ್ರಹಿಸಿದ್ದರು. ಚಂದ್ರಮ್ಮ ಹಾಗೂ ಸರಿತಾ ಎರಡು ತಿಂಗಳ ಹಿಂದೆಯೇ ಈ ಬಗ್ಗೆ ಮನವಿ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ಅರಣ್ಯ ಇಲಾಖೆ ಹಾಗು ಸ್ಥಳೀಯ ತಹಶೀಲ್ದಾರ್ಗೆ ಮಹಿಳೆಯರು ಆಗ್ರಹಿಸಿರುವುದು ವಿಡಿಯೋದಲ್ಲಿದೆ. ಮಹಿಳೆಯವ ಮನವಿಯ ನಡುವೆಯೂ ಸಂಬಂಧಪಟ್ಟ ಆಧಿಕಾರಿಗಳು ಮರದ ತೆರವಿಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಧೆಡೆ ಅನಾಹುತ: ಕಳೆದ 24 ಗಂಟೆಯಲ್ಲಿ ಮಳೆಯಿಂದ ಜಿಲ್ಲೆಯ ವಿವಿಧೆಡೆ 29ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ವರುಣನ ಆರ್ಭಟಕ್ಕೆ 4 ಹಸುಗಳು ಸಾವನ್ನಪ್ಪಿವೆ. ಮೇಲ್ಛಾವಣಿ ಸಮೇತ ಗೋಡೆ ಕುಸಿದು ಬಿದ್ದು, ಕೂದಲೆಳೆ ಅಂತರದಲ್ಲಿ ಮಹಿಳೆ ಪಾರಾದ ಘಟನೆ ತರೀಕೆರೆ ತಾಲೂಕಿನ ಸೀತಾಪುರ ಕಾವಲ್ನಲ್ಲಿ ನಡೆದಿದೆ. ವಳ್ಳಿಯಮ್ಮ ಎಂಬುವರು ಅಪಾಯದಿಂದ ಪಾರಾಗಿದ್ದಾರೆ.
ಜಿಲ್ಲೆಯ ಕಳಸ, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಬಯಲುಸೀಮೆ ಭಾಗದ ಕಡೂರು, ತರೀಕೆರೆಯಲ್ಲೂ ಭಾರಿ ಮಳೆಯಾಗುತ್ತಿದೆ. ಬಿರುಗಾಳಿ ಸಹಿತ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಭಿನ್ನಡಿ ಗ್ರಾಮದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಸಂದೇಶ್ ಎಂಬುವರ ಮನೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಹಾರ್ಮಕ್ಕಿ ಗ್ರಾಮದಲ್ಲೂ ಮನೆಯ ಗೋಡೆಗಳು ಕುಸಿದಿದ್ದು, ಬೈರೇಗೌಡ ಎಂಬುವರಿಗೆ ಸೇರಿದ ಮನೆಗೆ ಹಾನಿಯಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಮನೆ ಮೇಲೆ ಬೃಹತ್ ಮರ ಬಿದ್ದುಇಬ್ಬರು ಮಹಿಳೆಯರ ಸಾವು