ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತಿದೆ. ಕಾಫಿ ಡೇ ಸಂಸ್ಥಾಪಕ ದಿ.ಸಿದ್ದಾರ್ಥ್ ಅವರ ಕುಟುಂಬಕ್ಕೆ ಸೇರಿದ ತರೀಕೆರೆ ತಾಲೂಕಿನ ನಂದಿಗಾವೆ ಕಾಫಿ ತೋಟದಲ್ಲಿ ಗುಡ್ಡ ಕುಸಿತವಾಗಿದೆ.
ನಂದಿಗಾವೆ ಕಾಫಿ ತೋಟದಲ್ಲಿ ಗುಡ್ಡ ಕುಸಿತವಾಗಿ ಕಲ್ಲು ಬಂಡೆಗಳು ಜಾರಿ ಬಂದಿವೆ. ಸುಮಾರು ಒಂದು ಎಕರೆಗೂ ಹೆಚ್ಚು ಕಾಫಿ ತೋಟಕ್ಕೆ ಹಾನಿಯಾಗಿದೆ. ರಸ್ತೆಗಳಿಗೂ ಹಾನಿ ಸಂಭವಿಸಿದೆ. ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ಕಬ್ಬಿಣ ಸೇತುವೆ ಗ್ರಾಮದ ಬಳಿ ಯಾದವ್ ಎಂಬುವವರಿಗೆ ಸೇರಿದ ಆಲ್ಟೋ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಧರ್ಮಸ್ಥಳಕ್ಕೆ ಹೋಗಿ ಬರುತ್ತಿರುವ ಸಂದರ್ಭದಲ್ಲಿ ಘಟನೆ ನಡೆದಿದ್ದು, ಕಾರು ಕಾಫಿ ತೋಟದ ದಿಬ್ಬಕ್ಕೆ ಗುದ್ದಿದೆ. ಸ್ಥಳೀಯರು ಟ್ರ್ಯಾಕ್ಟರ್ ಸಹಾಯದಿಂದ ಕಾರನ್ನು ಮೇಲಕ್ಕಿತ್ತಿದ್ದಾರೆ.
ಮೂಡಿಗೆರೆ ತಾಲೂಕಿನ ಹಾರಮಕ್ಕಿ ಗ್ರಾಮದಲ್ಲಿ ಬೈರೇಗೌಡ ಎಂಬುವವರಿಗೆ ಸೇರಿದ ಮನೆ ಸಂಪೂರ್ಣ ಜಖಂ ಆಗಿದ್ದು, ಧವಸ ಧಾನ್ಯ ಸೇರಿ ಮನೆಯ ವಸ್ತುಗಳಿಗೆ ಹಾನಿ ಸಂಭವಿಸಿದೆ. ಬೃಹತ್ ಗಾತ್ರದ ಮರ ಬಿದ್ದು ಮನೆಯ ಮೇಲ್ಛಾವಣಿ ಕುಸಿದ ಘಟನೆ ಕೊಟ್ಟಿಗೆಹಾರ ಸಮೀಪದ ದೇವನಗುಲು ಗ್ರಾಮದಲ್ಲಿ ನಡೆದಿದೆ. ಬಾಬು ಎಂಬುವರಿಗೆ ಸೇರಿದ ಮನೆ ಗೋಡೆಗಳಿಗೂ ಹಾನಿಯಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಉತ್ತಮ ವರ್ಷಧಾರೆ: ಈ ವರ್ಷ ಭರ್ತಿಯಾದ ಕೆರೆಗಳ ವಿವರ ಇಲ್ಲಿದೆ
ಕೊಟ್ಟಿಗೆಹಾರದ ಬಳಿ ಆಲೇಖನ್ ಹೊರಟ್ಟಿ ಸಮೀಪ ಎರಡು ಲಾರಿಗಳು ಕೆಟ್ಟು ನಿಂತು ಕೊಟ್ಟಿಗೆ ಹಾರದಿಂದ ನಾಲ್ಕೈದು ಕಿ.ಮೀ.ವರೆಗೂ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ದಟ್ಟಣೆ ಕ್ಲಿಯರ್ ಮಾಡಿಸಲು ಹರಸಾಹಸ ಪಟ್ಟರು.