ಚಿಕ್ಕಮಗಳೂರು: ಕಾಣೆಯಾಗಿದ್ದ 5 ವರ್ಷದ ಹೆಣ್ಣು ಮಗುವನ್ನು 40 ನಿಮಿಷಗಳಲ್ಲಿ ಪತ್ತೆ ಹಚ್ಚುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಎಂ.ಜಿ.ರಸ್ತೆಯಲ್ಲಿ 5 ವರ್ಷದ ಹೆಣ್ಣು ಮಗು ಕಾಣೆಯಾಗಿರುವ ಬಗ್ಗೆ ಮಗುವಿನ ತಾಯಿ 112 ಸಹಾಯವಾಣಿಗೆ ಕರೆ ಮಾಡಿದ್ದರು. ಕರೆ ಬಂದ ತಕ್ಷಣ ತುರ್ತು ಸ್ಪಂದನ (Emergency Response) ವಾಹನ ಸ್ಥಳಕ್ಕೆ ತೆರಳಿ ಮಗುವಿನ ಚಹರೆ ಮತ್ತು ಧರಿಸಿದ್ದ ಬಟ್ಟೆಗಳ ವಿವರಗಳನ್ನು ಪಡೆದು ಕೂಡಲೇ ಕಾರ್ಯ ಪ್ರವೃತ್ತರಾಗಿದ್ದಾರೆ.
ತುರ್ತು ಸ್ಪಂದನ ವಾಹನದಲ್ಲಿದ್ದ ಪೊಲೀಸ್ ತಂಡ ನಗರದಲ್ಲಿ ಎಲ್ಲ ಕಡೆ ಮಗುವಿಗಾಗಿ ಹುಡುಕಾಟ ಪ್ರಾರಂಭಿಸಿತು. ಮಗು ಕಾಣೆಯಾಗಿರುವ ಬಗ್ಗೆ ವಾಹನದಲ್ಲಿದ್ದ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಿ ಹಾಗೂ ಪೊಲೀಸ್ ಕಂಟ್ರೋಲ್ ರೂಂ ಮೂಲಕ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಮಗುವಿನ ವಿವರಗಳನ್ನು ರವಾನಿಸಿ ಪತ್ತೆಗಾಗಿ ಸೂಚನೆ ನೀಡಲಾಗಿತ್ತು.
ಅಂತಿಮವಾಗಿ ಕಾಣೆಯಾಗಿದ್ದ ಮಗುವನ್ನು ತುರ್ತು ಸ್ಪಂದನ ವಾಹನದಲ್ಲಿದ್ದ ಪೊಲೀಸ್ ತಂಡ ನಗರದ ಹೊಸಮನೆ ಬಡಾವಣೆ ಹತ್ತಿರ ಪತ್ತೆ ಹಚ್ಚಿ, ಆಕೆಯ ತಂದೆ ತಾಯಿಗೆ ಒಪ್ಪಿಸಿದ್ದಾರೆ. ಸದರಿ ಕಾಣೆಯಾಗಿದ್ದ ಮಗುವನ್ನು 40 ನಿಮಿಷಗಳಲ್ಲಿ ಯಶಸ್ವಿಯಾಗಿ ಪತ್ತೆ ಮಾಡಲಾಗಿದ್ದು, ಪತ್ತೆ ಮಾಡಿದ ಎಲ್ಲ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಎಸ್ಪಿ ಅಕ್ಷಯ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.