ಚಿಕ್ಕಮಗಳೂರು: ನಗರದಲ್ಲಿ ನಡೆದ ಲವ್ ಜಿಹಾದ್ ಆರೋಪ ಪ್ರಕರಣ ಎರಡು ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ. ಸದ್ಯ ಮಾಧ್ಯಮಗಳ ಮುಂದೆ ಬಂದಿರುವ ಯುವಕ ಹಾಗೂ ಯುವತಿ ನಾವು ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ಇಬ್ಬರೂ ಇಷ್ಟಪಟ್ಟು ಮದುವೆಗೆ ಮುಂದಾಗಿದ್ದೇವೆ. ನಮ್ಮನ್ನು ಕೇಳಲು ಅವರ್ಯಾರು ಎಂದು ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಸರಳ್ಳಿಯ ಲಕ್ಷೀಪುರ ಗ್ರಾಮದ ಯುವಕ ಜಾಫರ್ ಹಾಗೂ ಯುವತಿ ಚೈತ್ರಾ ಮಾಧ್ಯಮಗಳ ಮುಂದೆ ಬಂದವರು. 'ಮದುವೆಯಾಗಲು ಹೊರಟಿದ್ದ ವೇಳೆ ನನ್ನನ್ನು ಎಳೆದಾಡಿ, ಕೆಟ್ಟ ಕೆಟ್ಟದಾಗಿ ಬೈದು, ನನ್ನ ಗಂಡನಿಗೆ ಹಲ್ಲೆ ಮಾಡಿದ್ದಾರೆ. ಹಿಂದೂ ಹುಡುಗಿ ಬೇಕಾ, ಎಸ್ಸಿ ಹುಡುಗಿ ಬೇಕಾ ಅಂತ ಪತಿಯನ್ನು ಥಳಿಸಿದ್ದಾರೆ' ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾಳೆ.
'ಸಂಘಟನೆಯವರು ಏನಾದರೂ ಮಾಡುತ್ತಾರೆಂದು ಪೊಲೀಸರು ನನ್ನನ್ನು ಮನೆಗೆ ಕಳುಹಿಸಲಿಲ್ಲ. ಮನೆಗೆ ಕಳುಹಿಸದೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಆರೋಪಿಗಳಿಗಳನ್ನು ಬಿಡುಗಡೆ ಮಾಡಲಾಗಿದೆ. ನಮ್ಮ ಮೇಲೆ ಹಲ್ಲೆ ಮಾಡಿ, ಕೆಟ್ಟದಾಗಿ ಬೈದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಯುವತಿ, ನಮಗೆ ನ್ಯಾಯ ಬೇಕು. ಮದುವೆ ತಡೆಯಲು ಬಂದ ಎಲ್ಲರಿಗೂ ತಕ್ಕ ಶಿಕ್ಷೆ ಆಗಬೇಕು' ಎಂದು ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆ: ಚಿಕ್ಕಮಗಳೂರು ನಗರದಲ್ಲಿ ಯುವಕ ಹಾಗೂ ಯುವತಿ ಬುಧವಾರ ವಿವಾಹ ನೋಂದಣಿಗೆ ತೆರಳಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ಲವ್ ಜಿಹಾದ್ ಆರೋಪ ಮಾಡಿ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಲ್ಲದೇ, ಗಂಟೆಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಸಂಬಂಧ ನಾಲ್ವರು ಹಿಂದೂ ಕಾರ್ಯಕರ್ತರ ವಿರುದ್ಧ ನೈತಿಕ ಪೊಲೀಸ್ ಗಿರಿ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ದಾಸರಳ್ಳಿಯ ಲಕ್ಷೀಪುರ ಗ್ರಾಮದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಇಬ್ಬರೂ ವಿವಾಹ ನೋಂದಣಿಗೆ ಎಂದು ನಗರದ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದರು. ವಿಚಾರ ತಿಳಿದ ಹಿಂದೂ ಸಂಘಟನೆಯ ಕೆಲವು ಯುವಕರು 'ಇದು ಲವ್ ಜಿಹಾದ್ ಪ್ರಕರಣ' ಎಂದು ಆರೋಪಿಸಿ ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆ ತಂದಿದ್ದರು.
ಇದನ್ನೂ ಓದಿ: 'ಇದು ಲವ್ ಜಿಹಾದ್' ಎಂದ ಹಿಂದೂ ಕಾರ್ಯಕರ್ತರು: 'ಮಗಳು-ಅಳಿಯ ಸುರಕ್ಷಿತವಾಗಿರಲಿ' ಎಂದ ತಾಯಿ