ಚಿಕ್ಕಮಗಳೂರು : ಕಳಸ ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾರ್ಲೆ ಎಂಬ ಕುಗ್ರಾಮದಲ್ಲಿ ಇಂದಿಗೂ ಯಾವುದೇ ರೀತಿಯ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲ. ಜನರು ಸಂಕಟ ಅನುಭವಿಸುತ್ತಿದ್ದಾರೆ. ಗ್ರಾಮಕ್ಕೆ ಯಾವುದೇ ಅಧಿಕಾರಿಗಳು ಈವರೆಗೂ ಭೇಟಿ ನೀಡಿಲ್ಲ. ನಾವು ತಮ್ಮ ಕಷ್ಟಗಳನ್ನು ಯಾರ ಹತ್ತಿರ ಹೇಳಿಕೊಳ್ಳುವುದು ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾಡಂಚಿನ ಕಾರ್ಲೆ ಗ್ರಾಮದಲ್ಲಿ ಸುಮಾರು 28 ಕುಟುಂಬಗಳು ನೆಲೆಸಿದ್ದಾರೆ. ಈ ಕುಗ್ರಾಮದಿಂದ ಪಕ್ಕದ ಜೇಡಿಕೊಂಡಕ್ಕೆ ಹೋಗಬೇಕಾದರೆ ಎರಡು ಕಿಲೋಮೀಟರ್ ಸಾಗಬೇಕು. ಅಲ್ಲಿಯೂ ಹತ್ತಾರು ಮನೆಗಳಿದ್ದು ಆ ಜನರದ್ದೂ ಇದೇ ಗೋಳು. ಗ್ರಾಮದಿಂದ ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ. ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಇಂದಿಗೂ ಸೀಮೆಎಣ್ಣೆ ಬುಡ್ಡಿಯ ದೀಪದಲ್ಲೇ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ತಮ್ಮ ನೋವು ತೋಡಿಕೊಂಡರು.
ಈ ಕುರಿತು ಮಾತನಾಡಿದ ಗ್ರಾಮಸ್ಥರಾದ ನವೀನ್ ಮತ್ತು ಬೆಳಮ್ಮ ಎಂಬವರು, ಜನರು ದಿನನಿತ್ಯ ಕೂಲಿ ಕೆಲಸ ಮಾಡಿ ವಾರಕ್ಕೊಮ್ಮೆ ರೇಷನ್ ತರಬೇಕು. ಇಲ್ಲಿಂದ ಸುಮಾರು 22 ಕಿ.ಮೀ ದೂರದಲ್ಲಿ ಪ್ರಮುಖ ಪಟ್ಟಣ ಕಳಸ ಇದೆ. ಈ ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ಹೋಗಬೇಕಾದರೆ ಜೋಲಿಗೆ ಕಟ್ಟಿ ಹೊತ್ತುಕೊಂಡು ಹೋಗಬೇಕು. ಇಂಥ ಪರಿಸ್ಥಿತಿಯಲ್ಲಿ ಈ ಭಾಗದ ಜನರು ಬದುಕುತ್ತಿದ್ದಾರೆ.
ಗರಿಷ್ಠ ಮಟ್ಟದ ಜನರಿಗೆ ಸ್ವಂತ ಮನೆಯೂ ಇಲ್ಲದೇ, ಹುಲ್ಲಿನ ಮನೆಮಾಡಿ ಹುಲ್ಲಿನ ಮನೆ ಸುತ್ತ ಅಡಿಕೆ ಮರದ ಹಾಳೆಯ ತಟ್ಟಿ ಮಾಡಿ ವಾಸಿಸುತ್ತಿದ್ದಾರೆ. ಕಾಡುಪ್ರಾಣಿಗಳಿಗಿಂತ ಹೀನಾಯವಾಗಿ ಜನರು ಬದುಕು ನಡೆಸುವಂತಾಗಿದೆ. ಮಳೆಗಾಲದಲ್ಲಂತೂ ಗ್ರಾಮದಲ್ಲಿ ಸೇತುವೆಗಳು ಇಲ್ಲದ ಕಾರಣ ಹಳ್ಳ ಉಕ್ಕಿ ಹರಿಯುತ್ತದೆ. ಜನರು ಸಂಕದಲ್ಲೇ ಸಂಚಾರ ಮಾಡಬೇಕಿದೆ. ಒಂದು ವೇಳೆ ಆಯತಪ್ಪಿ ಹಳ್ಳಕ್ಕೆ ಬಿದ್ದರೆ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.
ಗ್ರಾಮದಲ್ಲಿ 60ರಿಂದ 70 ವರ್ಷದಿಂದ ವಾಸಿಸುತ್ತಿರುವಂತಹ ಹಿರಿಜೀವಗಳಿದ್ದಾರೆ. ಈವರೆಗೂ ಜನರಿಗೆ ರೇಷನ್ ಕಾರ್ಡ್, ವಯಸ್ಸಾದವರಿಗೆ ಪಿಂಚಣಿ ಬರುತ್ತಿಲ್ಲ. ಗ್ರಾಮಕ್ಕೆ ಯಾವುದೇ ಅಧಿಕಾರಿಗಳು ಈವರೆಗೂ ಭೇಟಿ ನೀಡಿಲ್ಲ ಎಂದರು.
ಇದನ್ನೂ ಓದಿ : ಜಮೀನಿಗೆ ಅಳವಡಿಸಿದ ಐಬೆಕ್ಸ್ ತಂತಿ ವಶಕ್ಕೆ ಪಡೆದ ಆರೋಪ: ಬುಡಕಟ್ಟು ಅರಣ್ಯವಾಸಿಗಳ ಗೋಳು