ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಕಳೆದುಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆ, ಅದರ ಕರಾಳ ದಿನವನ್ನು ಜಿಲ್ಲೆಯ ಯುವ ಜನತಾದಳ ಕಾರ್ಯಕರ್ತರು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪುರ ಗ್ರಾಮದಲ್ಲಿ ಯುವ ಜನತಾದಳದ ಕಾರ್ಯಕರ್ತರು ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ್ದಾರೆ. ಇದೇ ವೇಳೆ ಮಾತನಾಡಿರುವ ಜೆಡಿಎಸ್ ಕಾರ್ಯಕರ್ತರು ಹೆಚ್. ಡಿ. ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡು ವರ್ಷ ತುಂಬಿದೆ. ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಜೆಡಿಎಸ್ ಕಾರ್ಯಕರ್ತರು ಭತ್ತದ ನಾಟಿ ಕೆಲಸ ಮಾಡುವುದರ ಮೂಲಕ ಸಂಕಲ್ಪ ಮಾಡಿದ್ದೇವೆ ಎಂದರು.
ಬೆಂಗಳೂರಿನಿಂದ ಕೆಲಸ ಕಳೆದುಕೊಂಡು ಬಂದ ಹತ್ತಾರು ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಭತ್ತದ ಕೆಲಸ ಲಾಭದಾಯಕವಲ್ಲ ಎಂಬ ಭಾವನೆ ತುಂಬಾ ಜನರಲ್ಲಿದೆ. ಈ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ಈ ಎಲ್ಲಾ ಕಾರ್ಯಕರ್ತರಿಗೆ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಅವರು ಸಾಥ್ ನೀಡಿದ್ದು ವಿಶೇಷವಾಗಿತ್ತು.