ಚಿಕ್ಕಮಗಳೂರು: ಕಳೆದ ಒಂದು ತಿಂಗಳ ಹಿಂದೆ ಆರ್ಭಟಿಸಿದ ಕೋವಿಡ್ ಎರಡನೇ ಅಲೆ, ಪ್ರಸ್ತುತ ನಿಯಂತ್ರಣಕ್ಕೆ ಬರುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ. ಆದರೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಾತ್ರ ಪಾಸಿಟಿವಿಟಿ ದರ ಶೇ.28 ರಷ್ಟು ಇದ್ದು, ಇಡೀ ರಾಜ್ಯದಲ್ಲಿ ಚಿಕ್ಕಮಗಳೂರಿನ ಪಾಸಿಟಿವ್ ರೇಟ್ ಅಗ್ರಸ್ಥಾನದಲ್ಲಿದೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಕರ್ಫ್ಯೂ, ಲಾಕ್ ಡೌನ್ ಎಲ್ಲವೂ ಮಾಡಿ ಆಯ್ತು ಆದರೂ ಸೋಂಕು ಮಾತ್ರ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಪ್ರತಿನಿತ್ಯ 600 ರಿಂದ 700 ಪಾಸಿಟಿವ್ ಪ್ರಕರಣಗಳು ವರದಿಯಾಗ್ತಿವೆ. ಸೋಂಕು ನಿಯಂತ್ರಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಕೊಂಚ ಸಮಾಧಾನ ವಿಷಯವೆಂದರೆ, ಒಂದು ವಾರದ ಹಿಂದೆ ಶೇ.37-38 ಇದ್ದ ಪಾಸಿಟಿವಿಟಿ ದರ, ಈಗ ಶೇ.27 ಕ್ಕೆ ಬಂದು ನಿಂತಿದೆ.
ಆರಂಭದಲ್ಲಿ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಂಡು ಬರುತ್ತಿತ್ತು. ಈಗ ಗ್ರಾಮೀಣ ಭಾಗದಲ್ಲೂ ವ್ಯಾಪಿಸುತ್ತಿದೆ. ಕೋವಿಡ್ ಈ ಅಬ್ಬರಿಸುತ್ತಿದ್ದರೂ, ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರ ಪರೀಕ್ಷೆಯೇ ನಡೆಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕೆಲ ದಿನಗಳ ಹಿಂದೆ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಸೋಂಕಿತರಿರುವ ವಾರ್ಡ್ಗೆ ಸಂಬಂಧಿಕರು ಯಾವುದೇ ಮುನ್ನೆಚ್ಚರಿಕೆ ವಹಿಸದೆ ಹೋಗಿ ಬರುವುದು. ಕೋವಿಡ್ ಸೋಂಕಿತರ ಶವದ ಪಕ್ಕದಲ್ಲೇ ಊಟ ಮಾಡುವುದು ಸೇರಿದಂತೆ ಆಸ್ಪತ್ರೆಯ ದುಸ್ಥಿತಿಯ ಬಗ್ಗೆ ದೊಡ್ಡಮಟ್ಟದ ಸುದ್ದಿಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಪಾಸಿಟಿವಿಟಿ ದರ ಹೆಚ್ಛಳದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಉಮೇಶ್, ನಾವು ಪರೀಕ್ಷೆ ಹೆಚ್ಚಳ ಮಾಡಿದ್ದೇವೆ ಹಾಗಾಗಿ ಪಾಸಿಟಿವಿಟಿ ದರ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಜೂನ್ 9 ರಂದು 339 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 699 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 41,598 ಆಗಿದ್ದು, ಗುಣಮುಖರಾದವರ ಸಂಖ್ಯೆ 37,105 ಇದೆ. ಪ್ರಸ್ತುತ 4,210 ಸಕ್ರಿಯ ಪ್ರಕರಣಗಳಿವೆ.
ಕೋವಿಡ್ ವಿರುದ್ದದ ದೊಡ್ಡ ಹೋರಾಟದ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ತಗ್ಗಿದೆ. ಪ್ರಸ್ತುತ ಸಿಲಿಕಾನ್ ಸಿಟಿಯ ಪಾಸಿಟಿವ್ ದರ ಶೇ. 5 ಕ್ಕಿಂತ ಕೆಳಗೆ ಬಂದಿದೆ. ಪ್ರತಿದಿನದ ಸೋಂಕಿನ ಆಧಾರದ ಮೇಲೆ ಕೊಂಚ ಏರುಪೇರು ಆಗುತ್ತಿದೆ.
ಓದಿ : ಪಕ್ಕದಲ್ಲೇ ಸೋಂಕಿನ ಶವ, ಅಲ್ಲೇ ಊಟ ಮಾಡುವ ಕೋವಿಡ್ ರೋಗಿ.. ಈ ಸ್ಥಿತಿ ಯಾರಿಗೂ ಬೇಡ