ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನೆಲೆಯಲ್ಲಿ ಡಿ.17ರಿಂದ 26 ರವರೆಗೆ ಜಿಲ್ಲಾಡಳಿತ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ. 2022ರ ಮುಜರಾಯಿ ಇಲಾಖೆಯ ನಿರ್ದೇಶನದಂತೆ ದತ್ತಜಯಂತಿ ಜಯಂತಿ ಆಚರಣೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಮಾತನಾಡಿ, "ದತ್ತ ಜಯಂತಿಗೆ ಜಿಲ್ಲೆಯ ಭಕ್ತರು ಮಾತ್ರ ಅಲ್ಲ, ಬೇರೆ ಬೇರೆ ಜಿಲ್ಲೆಗಳ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ನಾವು ಬೇರೆ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ಯಾರು ಬರ್ತಾರೆ, ಯಾರ ನೇತೃತ್ವದಲ್ಲಿ ಬರುತ್ತಾರೆ ಎಂಬ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ದತ್ತಪೀಠಕ್ಕೆ ಲಾಂಗ್ ಚಾರ್ಸಿ ವಾಹನಗಳ ಮೂಲಕ ಬರುವುದಕ್ಕೆ ನಿಷೇಧ ಇದೆ. ಆದರೂ ಕೊನೆ ದಿನಗಳಲ್ಲಿ ಭಕ್ತರು ಲಾಂಗ್ ಚಾರ್ಸಿ ವಾಹನಗಳ ಬರುತ್ತಾರೆ. ಈ ಬಾರಿ ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಅಲ್ಲಂಪುರ ವಾಹನ ನಿಲುಗಡೆ ತಾಣ ಬಳಿ ಆರ್ಟಿಒ ಅಧಿಕಾರಿಗಳು ನಾನ್ ಚಾರ್ಸಿ ವಾಹನಗಳ ವ್ಯವಸ್ಥೆ ಮಾಡುತ್ತಾರೆ. ಆ ವಾಹನಗಳ ಮೂಲಕ ಭಕ್ತರು ದತ್ತಪೀಠಕ್ಕೆ ಹೋಗಬೇಕಾಗುತ್ತದೆ" ಎಂದರು.
"ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾದ್ಯಂತ ಹಾಗೂ ರಾಜ್ಯಾದ್ಯಂತ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಈಗಾಗಲೇ ಅಗತ್ಯ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಸಂರ್ಕೀತನಾ ಯಾತ್ರೆ, ಅನಸೂಯ ಯಾತ್ರೆ , ಶೋಭಾಯಾತ್ರೆ ಹಾಗೂ ಡಿ.26ರಂದು ನಡೆಯುವ ಜಯಂತಿಗೆ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಬೇರೆ ಬೇರೆ ಜಿಲ್ಲೆಗಳಿಂದ ಬರುವ ಭಕ್ತರಿಗೆ ಮಾಹಿತಿ ಕಳುಹಿಸುವಂತೆ ತಿಳಿಸಿದ್ದೇವೆ. ಯಾವುದೇ ಸಂಘಟನೆ ಅಥವಾ ವ್ಯಕ್ತಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದೇವೆ. ವಿಶೇಷವೆಂದರೆ ಈ ಬಾರಿ ಮೆರವಣಿಗೆ ಮತ್ತು ಶೋಭಾಯಾತ್ರೆ ಹೊಗುವ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದೇವೆ. ಈ ಬಾರಿ ಶಾಂತಿಯುತವಾಗಿ ದತ್ತಜಯಂತಿ ನಡಸಲು ಎಲ್ಲಾ ಸಂಘಟನೆಗಳಿಗೆ ತಿಳಿಸಿದ್ದೇವೆ, ಅವರು ಸಹಕಾರ ಕೊಡುತ್ತೇವೆ ಎಂದು ಹೇಳಿದ್ದಾರೆ" ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, "ದತ್ತ ಜಯಂತಿ ಜಯಂತಿ ಆಚರಿಸಲು ಮುಜರಾಯಿ ಇಲಾಖೆಯ ನಿರ್ದೇಶನದಂತೆ ಜಿಲ್ಲಾಡಳಿತ ವತಿಯಿಂದ ಕ್ರಮ ಕೈಗೊಂಡಿದ್ದೇವೆ. ಕಳೆದ ಮೂರು ವಾರಗಳಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಎಲ್ಲೆಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಬೇಕು, ಎಲ್ಲೆಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಬೇಕು ಹಾಗೂ ಬಂದೋಬಸ್ತ್ಗೆ ಸಂಬಂಧಿಸಿದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಬೇರೆ ಬೇರೆ ಜಿಲ್ಲೆಗಳಿಂದ ಬರುವ ಭಕ್ತರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ" ಎಂದರು.
ಇದನ್ನೂ ಓದಿ: ಕೇಂದ್ರದ ಭದ್ರತಾ ಲೋಪದಿಂದ ಸಂಸತ್ ಭವನದ ಮೇಲೆ ದಾಳಿ: ಜಮೀರ್ ಅಹ್ಮದ್