ಚಿಕ್ಕಮಗಳೂರು: ಜಿಲ್ಲೆಯಲ್ಲಿ ಐವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಐದು ಪ್ರಕರಣಗಳಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರೊನಾ ಪಾಸಿಟಿವ್ ಬಂದಿರುವ ವೈದ್ಯನ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನ ಹುಡುಕುವ ಪ್ರಯತ್ನ ಪ್ರಾರಂಭಿಸಿದ್ದೇವೆ. ಈ ವೈದ್ಯ ತಪಾಸಣೆ ನಡೆಸಿರುವ ರೋಗಿಗಳ ಪಟ್ಟಿ ತಯಾರು ಮಾಡುತ್ತಿದ್ದು, ಇವರ ಬಳಿ ಹಾಸನ ಜಿಲ್ಲೆಯ ಕೆಲ ಜನರು ಕೂಡ ಚಿಕಿತ್ಸೆ ಪಡೆದಿದ್ದಾರೆ.
ವೈದ್ಯ ವಾಸವಾಗಿದ್ದ ಹೆಸಗಲ್ ಪ್ರದೇಶವನ್ನ ಕಂಟೇನ್ಮೆಂಟ್ ಝೋನ್ ಆಗಿ ಪರಿವರ್ತಿಸಿದ್ದು, ಬಫರ್ ಝೋನ್ ಕೂಡ ಮಾಡಲಾಗಿದೆ. ತರೀಕೆರೆಯಲ್ಲಿ ಕೂಡ ಒಂದು ಪ್ರಕರಣ ದಾಖಲಾಗಿದ್ದು, ಅವರ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಶೋಧ ಕಾರ್ಯ ಮಾಡಲಾಗುತ್ತಿದೆ.
ಎನ್ಆರ್ ಪುರ ತಾಲೂಕಿಗೆ ಸೇರಿರುವ ಎರಡು ಕುಟುಂಬಗಳ ಒಟ್ಟು 9 ಜನರು ಟೆಂಪೋ ಟ್ರಾವೆಲರ್ ಮೂಲಕ ಮುಂಬೈನಿಂದ ಬಂದಿದ್ದರು. ಇದರಲ್ಲಿ ಮೂರು ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಉಳಿದ ಆರು ಜನರ ಗಂಟಲು ದ್ರವ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಎಲ್ಲಾ ರೋಗಿಗಳಿಗೆ ಜಿಲ್ಲಾ ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.