ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಇತಿಹಾಸ ಪ್ರಸಿದ್ಧ ಅಯ್ಯನ ಕೆರೆ ಕೋಡಿ ಬಿದ್ದು ಹರಿಯುತ್ತಿದೆ. ಉಕ್ಕಿ ಹರಿಯುತ್ತಿರೋ ಕೆರೆಯನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಇತಿಹಾಸ ಪ್ರಸಿದ್ಧ ಕೆರೆ ಇದಾಗಿದೆ. 2,036 ಹೆಕ್ಟೇರ್ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರೋ ಈ ಕೆರೆ 5-6 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಸುತ್ತದೆ.
ಈ ಕೆರೆ ತುಂಬಿ ಕೋಡಿ ಬೀಳೋದು ಬಹಳ ಅಪರೂಪ. ಕಳೆದೆರಡು ವಾರಗಳಿಂದ ನಿರಂತರ ಮಳೆ ಹಿನ್ನೆಲೆ ಕೆರೆ ತುಂಬಿ ಕೋಡಿ ಬಿದ್ದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈ ದೃಶ್ಯ ನೋಡಲು ತಂಡೋಪತಂಡವಾಗಿ ಸ್ಥಳೀಯರು, ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್ ಕೊಲೆ ಹಳೇ ವೈಷಮ್ಯದಿಂದಲೇ ನಡೆದಿದೆ ಎಂದ ಶಿವಮೊಗ್ಗ ಎಸ್ಪಿ.. ಭಯ ಮೂಡಿಸುತ್ತಿದೆ ಸಿಸಿಟಿವಿ ದೃಶ್ಯ!
ಕಳೆದ ಬಾರಿಯೂ ಕೋಡಿ ಬಿದ್ದು ಜನ-ಜಾನುವಾರುಗಳ ದಾಹ ತಣಿಸಿತ್ತು. ಊರು ಕಾಲುವೆ, ಬಸವನ ಕಾಲುವೆ, ಕಡೇ ಕಾಲುವೆ, ಗೌರಿ ಹಳ್ಳಿ ಕಾಲುವೆ ಸೇರಿ ನಾಲ್ಕು ಕಾಲುವೆಗಳಾಗಿ ಹರಿಯೋ ನೀರು ಕೃಷಿಗೆ, ಜನಜೀವನಕ್ಕೆ ನೀರು ಪೂರೈಸುತ್ತದೆ. ಏಳು ಗುಡ್ಡಗಳ ಮಧ್ಯೆ ಇರುವ ಈ ಕೆರೆಯ ಸೌಂದರ್ಯವನ್ನು ಈಗ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.