ಚಿಕ್ಕಮಗಳೂರು: ಪ್ರಕೃತಿಯ ಐಸಿರಿಯೇ ಹಾಗೆ, ಮನಸೋಲದವರಿಲ್ಲ. ಸದ್ಯ ಕೊರೊನಾ, ಲಾಕ್ಡೌನ್ ಅಂತಾ ಜನರು ಮನೆಯಲ್ಲಿಯೇ ಕುಳಿತು ಮಂಕಾಗಿ ಹೋಗಿದ್ದಾರೆ. ಲಾಕ್ಡೌನ್ನಿಂದ ಮನೆಯಲ್ಲೇ ಲಾಕ್ ಆಗಿರೋ ಜನರು ಚಾನ್ಸ್ ಸಿಕ್ಕಿದರೆ ಚಾರ್ಮಾಡಿ ಘಾಟ್ ಕಡೆ ಒಮ್ಮೆ ಪಯಣ ಬೆಳೆಸಿ. ಮುಂಗಾರು ಮಳೆಯ ಸಿಂಚನದಿಂದ ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತೂ ನಿಸರ್ಗ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ.
ಹೌದು ಚಿಕ್ಕಮಗಳೂರು ಅಂದ್ರೆ ಸಾಕು. ಅಲ್ಲಿನ ಸೌಂದರ್ಯ ರಾಶಿ ಕಣ್ಮುಂದೆ ಬರುತ್ತೆ. ಬೆಟ್ಟ-ಗುಡ್ಡಗಳ ಸಾಲು, ಬಾನಿಗೆ ಮುತ್ತಿಕ್ಕುವ ಮಂಜಿನ ರಾಶಿ. ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯೋ ಜಲಧಾರೆ ಚಾರ್ಮಾಡಿಯ ಸೊಬಗನ್ನು ಇಮ್ಮಡಿಗೊಳಿಸಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನ ವರ್ಣಿಸಲು ಪದಗಳೇ ಸಾಲದು. ಮುಂಗಾರು ಮಳೆಯ ಸಿಂಚನದಿಂದ ಜಲಪಾತಗಳು ಜೀವ ಕಳೆ ಪಡೆದಿವೆ. ಬಂಡೆಗಳ ಮೇಲಿನಿಂದ ಝುಳು-ಝುಳು ನಿನಾದಗೈಯ್ಯುತ್ತಾ ಧುಮ್ಮಿಕ್ಕುವ ಜಲಧಾರೆ ಕ್ಷೀರಧಾರೆಯಂತೆ ಭಾಸವಾಗುತ್ತವೆ.
ದಟ್ಟವಾದ ಮಂಜು, ಚುಮು ಚುಮು ಚಳಿ, ಮಿಸ್ಸಾಗದೇ ಬರೋ ಮಳೆಯ ಮಧ್ಯೆ ಚಾರ್ಮಾಡಿಯ ಪಯಣ ಎಂಥವರಿಗೂ ರೋಮಾಂಚನ ತರಿಸುತ್ತೆ. ಚಾರ್ಮಾಡಿ ಚಾರಣಿಗರ ಸ್ವರ್ಗ. ಹಸಿರು ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕೋ ಜಲಧಾರೆಯ ಕವಲು. ಪ್ರಕೃತಿ ಮಾತೆಯ ನಿಸರ್ಗ ಚೆಲುವು. ಪ್ರತಿನಿತ್ಯ ತನ್ನತ್ತ ಕೈ ಬೀಸಿ ಕರೆಯುತ್ತಿದೆ.