ಚಿಕ್ಕಮಗಳೂರು: ಸಿಎಂ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.
ಓದಿ: ಆಡಳಿತದಲ್ಲಿ ಸಿಎಂ ಪುತ್ರನ ಹಸ್ತಕ್ಷೇಪ: ಸಚಿವ ಸಿ.ಪಿ.ಯೋಗೇಶ್ವರ್ ಅಸಮಾಧಾನ
ಗೊಂದಲಗಳಿಗೆ ತಲೆಕೆಡಿಸಿಕೊಳ್ಳುವ ಸಮಯ ಇದಲ್ಲ. ಜನರೊಟ್ಟಿಗೆ ಇದ್ದು ವಿಶ್ವಾಸ ತುಂಬಿ ನಮ್ಮ ಕರ್ತವ್ಯ ಮಾಡಬೇಕು. ಆ ಕೆಲಸವನ್ನ ಮಾಡುವಂತೆ ಆಗ್ರಹಪೂರಕವಾಗಿ ವಿನಂತಿ ಮಾಡುತ್ತೇನೆ. ಯಾರು ಹೇಗೆ ವಿಷಯ ಬಿಡ್ತಾ ಇದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿ, ಸಚಿವರು, ಶಾಸಕರು ತಲೆಕೆಡಿಸಿಕೊಳ್ಳ ಬೇಕಾಗಿರೋದು ಸಿಎಂ ಯಾರಾಗ್ತಾರೆ ಅಂತಲ್ಲ. ನಾವು ಈಗ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ನಮ್ಮನ್ನ ಆರಿಸಿದ ಜನ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ನಿಲ್ಲಬೇಕಿದೆ. ಕೆಲವೊಮ್ಮೆ ಆಧಾರವಿಲ್ಲದೆ ಸುದ್ದಿಗಳು ಬರುತ್ತವೆ, ರಾಜಕಾರಣದಲ್ಲಿ ಬೆಂಕಿ ಇಲ್ಲದೇನೂ ಹೊಗೆಯಾಡುತ್ತದೆ. ಊಹಾಪೋಹವಾದ ಆಧಾರವಿಲ್ಲದ ಪ್ರಶ್ನೆಗೆ ಉತ್ತರಿಸೋಕೆ ಬರುವುದಿಲ್ಲ, ಅಂತೆ ಕಂತೆಗಳಿಗೆಲ್ಲ ನಮ್ಮಂತ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಉತ್ತರಿಸಬಾರದು ಎಂದು ಹೇಳಿದರು.
ಸಿಎಂ ಪರ ಶಾಸಕ ಕುಮಾರಸ್ವಾಮಿ ಬ್ಯಾಟಿಂಗ್:
ಬಿಎಸ್ವೈ ಬಿಟ್ಟು ಬಿಜೆಪಿಯಲ್ಲಿ ಯಾರು ಸ್ಟಾರ್ ಲೀಡರ್ ಇದ್ದಾರೆ ತೋರಿಸಲಿ ಎಂದು ಸಿಎಂ ಪರ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ದಾರೆ. ಅವರಿಂದ ಅಧಿಕಾರ, ಬೋರ್ಡ್ ಪಡೆದವರು ಮಾತನಾಡಬೇಕು. ನಾಯಕತ್ವ ಬದಲಾವಣೆ, ಚರ್ಚೆ ಈಗ ಅಪ್ರಸ್ತುತ ಎಂದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ನಾಯಕರ ಬಳಿ ಶಾಸಕರ ನಿಯೋಗ ಹೋಗಲು ರೆಡಿ, ಯಡಿಯೂರಪ್ಪನವರೇ ಮುಂದುವರೆಯಬೇಕು ಎಂದು ಹೇಳುತ್ತೇವೆ. ನಾಯಕತ್ವವನ್ನ ಬದಲಾಯಿಸುವುದು ದೊಡ್ಡ ವಿಚಾರವಲ್ಲ. ಬೇರೆ ಸ್ಟಾರ್ ಲೀಡರ್ ಯಾರಿದ್ದಾರೆ ತೋರಿಸಲಿ. ಬದಲಾವಣೆ ಬೇಡವೇ ಬೇಡ ಎಂದು ಕೇಂದ್ರದ ನಾಯಕರಿಗೆ ಮನವಿ ಮಾಡಿದರು.
ಕೊರೊನಾ ಹತೋಟಿಗೆ ತರಲು ಸಿಎಂ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವದ ಬದಲಾವಣೆ ಚರ್ಚೆ ಅಪ್ರಸ್ತುತ. ದಕ್ಷಿಣ ಭಾರತದಲ್ಲಿ 2 ಬಾರಿ ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪನವರೇ ಕಾರಣ ಎಂದು ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.