ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ ಜನರು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇರೋದಿಲ್ಲ. ಗೆದ್ದವರೆಲ್ಲಾ ನಮ್ಮವರೇ ಎಂದು ಹೇಳಿಕೊಳ್ತೇವೆ. ಆದರೆ ಈಗ ಏನೂ ಹೇಳಲು ಹೋಗೋದಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಬಿಜೆಪಿ ಬೆಂಬಲಿಗರೇ ಅಧಿಕಾರದಲ್ಲಿದ್ದಾರೆ. ಇದಕ್ಕೆ ಸಹಕಾರಿ ಸಂಘದ ಚುನಾವಣೆಯೇ ಸಾಕ್ಷಿ. ಅತಿ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಬೆಂಬಲಿಗರೇ ಗೆದ್ದು ಬಂದಿದ್ದಾರೆ. ರಾಜ್ಯದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಗರೇ ಗೆದ್ದು ಬರುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಅತಿ ಹೆಚ್ಚು ಅನುದಾನವನ್ನು ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಒಂದೊಂದು ಪಂಚಾಯಿತಿಗೆ 1 ರಿಂದ 4 ಕೋಟಿ ವರೆಗೂ ಅನುದಾನ ಸಿಗಲಿದೆ ಎಂದು ಸಿ.ಟಿ.ರವಿ ಹೇಳಿದರು.
ಗ್ರಾಮ ಸ್ವರಾಜ್ ಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ. ದೇಶ ಸ್ವಾವಲಂಬಿ ಆಗಬೇಕಾದರೆ ಪಂಚಾಯಿತಿ ಕೂಡ ಸ್ವಾವಲಂಬಿ ಆಗಬೇಕು. ಆತ್ಮನಿರ್ಭರದ ಕಡೆ ಪಂಚಾಯಿತಿ ಹೆಜ್ಜೆ ಹಾಕಬೇಕು ಎಂದು ಅವರು ಹೇಳಿದರು.