ಚಿಕ್ಕಮಗಳೂರು/ಮಂಗಳೂರು: ಬಿಜೆಪಿ - ಜೆಡಿಎಸ್ ಮೈತ್ರಿ ಸಂಬಂಧ ನಮ್ಮ ವರಿಷ್ಠರು ಅಳೆದು ತೂಗಿ ನಿರ್ಣಯ ತೆಗೆದುಕೊಂಡಿರುತ್ತಾರೆ ಅನ್ನೋದು ನಮ್ಮ ನಂಬಿಕೆ ಮತ್ತು ವಿಶ್ವಾಸ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು. ಲೋಕಸಭಾ ಚುನಾವಣೆಗೆ ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮೈತ್ರಿ ಕುರಿತು ವರಿಷ್ಠರು ಅಧಿಕೃತವಾಗಿ ಪ್ರಕಟಿಸಿದ ನಂತರ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ದೇಶಕ್ಕೆ ಮೋದಿ ಮತ್ತೆ ಪ್ರಧಾನಿ ಆಗಬೇಕು, ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ರಾಜ್ಯದ ಜನರ ಅಪೇಕ್ಷೆಯಾಗಿದೆ. ಕಾಂಗ್ರೆಸ್ ತನ್ನ ಮೈತ್ರಿ ಕೂಟದ ಒಡಲಲ್ಲಿ ಸನಾತನ ಧರ್ಮದ ವಿಷ ಬೀಜಗಳನ್ನೆ ತುಂಬಿ ಕೊಂಡಿದೆ. ಅದಕ್ಕೆ ಉದಯನಿಧಿ ಸ್ಟಾಲಿನ್, ರಾಜ ಕೊಟ್ಟಿರೋ ಹೇಳಿಕೆಗಳಿಗೆ ಹಲವು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಈಗ ಡ್ಯಾಮೇಜ್ ಆಗುತ್ತಿದೆ ಎಂದು ದೂರ ಇರುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗಿರೋದು ಸನಾತನ ಧರ್ಮದ ದ್ವೇಷ, ಭಾರತದ ಬಗ್ಗೆ ಅಸಹನೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೈತ್ರಿ ವಿಚಾರವಾಗಿ ಮಾತುಕತೆ: ಮತ್ತೊಂದೆಡೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತುಕತೆ ಪ್ರಾರಂಭವಾಗಿದೆ. ಬಿಜೆಪಿ ಈಗ ರಾಜ್ಯದಲ್ಲಿ 25+1 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಮುಂದಿನ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಲು ಪ್ರಯತ್ನಿಸುತ್ತೇವೆ. ಮೈತ್ರಿ ಬಗ್ಗೆ ಚರ್ಚೆ ಪ್ರಾರಂಭವಾಗಿದೆ, ಈ ಬಗ್ಗೆ ಮುಂದೆ ಎಲ್ಲರೂ ಕುಳಿತು ಚುನಾವಣೆ ತಂತ್ರಗಾರಿಕೆಯ ಬಗ್ಗೆ ಚರ್ಚಿಸಲಿದ್ದೇವೆ ಎಂದರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್, ಡಿ.ರಾಜಾ ಸೇರಿದಂತೆ ಕಾಂಗ್ರೆಸ್ನ ಹಲವಾರು ನಾಯಕರು ಹಿಂದೂ ಧರ್ಮವನ್ನು ಅವಹೇಳನ ಮಾಡಿ ಹೇಳಿಕೆ ನೀಡಿದ್ದಾರೆ. ಇದು ಸನಾತನ ಸಂಸ್ಕೃತಿಗೆ ಧಕ್ಕೆ ತರುವಂತಾಗಿದೆ. ಇವರಿಗೆ ಭಾರತದ ಸಂಸ್ಕೃತಿ ಪರಂಪರೆಯ ಬಗ್ಗೆ ನಂಬಿಕೆಯಿಲ್ಲ. ಡಾ.ಜಿ.ಪರಮೇಶ್ವರ್ ಹಾಗೂ ಪ್ರಿಯಾಂಕ್ ಖರ್ಗೆ ಕೂಡ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ. ಸನಾತನ ಧರ್ಮದ ಬಗ್ಗೆ ಸೋನಿಯಾ , ರಾಹುಲ್ ಗಾಂಧಿಯವರ ಅನಿಸಿಕೆ ಏನು ಎಂಬುದನ್ನು ತಿಳಿಸಲಿ ಈ ದೇಶದ ಸಂಸ್ಕೃತಿಯ ಬಗ್ಗೆ ಇವರ ನಂಬಿಕೆ ಏನೆಂಬುದರ ಬಗ್ಗೆ ಹೇಳಿಕೆಯನ್ನು ಕೊಡಲಿ ಎಂದು ಒತ್ತಾಯಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅನಿವಾರ್ಯ: ಇನ್ನು ಜೆಡಿಸ್ - ಬಿಜೆಪಿ ಮೈತ್ರಿ ಬಗ್ಗೆ ರಾಮನಗರದಲ್ಲಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಮಾತನಾಡಿ, ಎನ್ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರಿಕೊಳ್ಳುತ್ತದೆ. ನಾವು ಕಾಂಗ್ರೆಸ್ ಬಗ್ಗು ಬಡಿಯುತ್ತೇವೆ. ಚುನಾವಣೆ ಗೆಲ್ಲಲು ಹೊಂದಾಣಿಕೆ ಅನಿವಾರ್ಯ. ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಬಹುದು. ಸಂಸದ ಡಿಕೆ ಸುರೇಶ್ ಅವರನ್ನು ಸೋಲಿಸುವುದೇ ನಮ್ಮ ಉದ್ದೇಶ. ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದೇ ನಮ್ಮ ಗುರಿ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅನಿವಾರ್ಯ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಜನಪ್ರಿಯತೆ ಇದೆ ಎಂಬ ಕಾರಣಕ್ಕೆ ಜೆಡಿಎಸ್-ಬಿಜೆಪಿಗೆ ಆತಂಕ: ಸಚಿವ ಕೃಷ್ಣ ಬೈರೇಗೌಡ