ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯನ ಮೇಲೆ ಯುವತಿಯೊಬ್ಬಳು ಮಗು ಮಾರಾಟ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಈ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪ ನಗರದಲ್ಲಿರುವ ಸಾರ್ವಜನಿಕ ಸರ್ಕಾರಿ ಆಸ್ವತ್ರೆಯ ವೈದ್ಯ ಡಾ. ಬಾಲಕೃಷ್ಣ ವಿರುದ್ಧ ನವಜಾತ ಶಿಶು ಮಾರಾಟ ಆರೋಪದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜಿಲ್ಲೆಯ ಅವಿವಾಹಿತ ಯುವತಿಯೊಬ್ಬಳು ಗರ್ಭಿಣಿಯಾಗಿದ್ದಳು. ಆಕೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿತ್ತು. ಮದುವೆಗೆ ಮೊದಲೇ ಮಗು ಆಗಿರುವ ಕಾರಣ ಸಮಸ್ಯೆಯಾಗುತ್ತದೆ ಎಂದು ಹೇಳಿ ವೈದ್ಯ ಬಾಲಕೃಷ್ಣ, ಶೃಂಗೇರಿ ತಾಲೂಕಿನ ಒಬ್ಬ ವ್ಯಕ್ತಿಗೆ ಮಗುವನ್ನು ಮಾರಾಟ ಮಾಡಿ, 5 ಸಾವಿರ ರೂ. ಹಣವನ್ನು ನನಗೆ ನೀಡಿದ್ದಾರೆ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ.
ಸದ್ಯ ಯುವತಿ ಶಿವಮೊಗ್ಗದ ಸರ್ಕಾರೇತರ ಸಂಸ್ಥೆಯಲ್ಲಿದ್ದು, ಮಗುವನ್ನು ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ.