ಚಿಕ್ಕಮಗಳೂರು: ಕಟ್ಟಡ ಮತ್ತು ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಕಂದಮ್ಮಗಳು ನಲುಗುತ್ತಿವೆ. ಒಂದೊಂದು ಕಡೆ ಒಂದೊಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳ ಸಮರ್ಪಕ ನಿರ್ವಹಣೆಗೆ ಅಂಗನವಾಡಿ ಕಾರ್ಯಕರ್ತೆಯರು ಹೆಣಗಾಡುತ್ತಿದ್ದಾರೆ. ಅನುದಾನ ಕಾಲಕಾಲಕ್ಕೆ ಬಿಡುಗಡೆ ಆಗದಿರುವುದೇ ಅದಕ್ಕೆ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ 1,825 ಅಂಗನವಾಡಿ ಕೇಂದ್ರಗಳ ಪೈಕಿ 70 ಬಾಡಿಗೆ ಮತ್ತು 1,555 ಸ್ವಂತ ಕಟ್ಟಡಗಳಲ್ಲಿ ಉಳಿದವು ಪಟ್ಟಣ ಪಂಚಾಯಿತಿ, ಗ್ರಾಪಂ ಸಮುದಾಯ ಭವನಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವೊಂದು ಕಟ್ಟಡಗಳು ಬಿರುಕು, ಶಿಥಿಲಗೊಂಡಿವೆ. ಹಾಗೆಯೇ, ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಇರುವುದಿಲ್ಲ. ಇನ್ನೂ ಕೆಲ ಕೇಂದ್ರಗಳಿಗೆ ಮಳೆ ನೀರು ನುಗ್ಗುತ್ತಿದೆ. ಹೀಗೆ ಹಲವಾರು ಸಮಸ್ಯೆಗಳನ್ನು ಕಾಣಬಹುದು.
ಕಾರ್ಯಕರ್ತೆಯರಿಗೆ ₹10 ಸಾವಿರ ಹಾಗೂ ಸಹಾಯಕಿಯರಿಗೆ ₹ 6 ಸಾವಿರ ಗೌರವ ಧನ ನೀಡಲಾಗುತ್ತಿದೆ. ಗೌರವಧನ ತೆಗೆದು ಹಾಕಿ, ಕೆಲಸಕ್ಕೆ ಸರಿಯಾದ ವೇತನ ನೀಡಬೇಕು. ಉದ್ಯೋಗ ಭದ್ರತೆ, ಪಿಎಫ್ ಸೌಲಭ್ಯ ನೀಡಬೇಕು. ಪೂರ್ವ ಪ್ರಾಥಮಿಕ ಶಾಲೆ ಕಡ್ಡಾಯ ಮಾಡಬೇಕು ಎಂದು ಜಿಲ್ಲಾ ಅಂಗನವಾಡಿ ಸಂಘಟನೆ ಅಧ್ಯಕ್ಷೆ ರಾಧಾ ಸುಂದರೇಶ್ ಒತ್ತಾಯಿಸಿದ್ದಾರೆ.
ತಾಯಿ ಮತ್ತು ಮಕ್ಕಳ ಅಪೌಷ್ಟಿಕತೆ ನಿಯಂತ್ರಿಸುವ ಉದ್ದೇಶದಿಂದ ಮಾತೃಪೂರ್ಣ ಯೋಜನೆಯಡಿ ₹21 ಕೋಟಿ ವೆಚ್ಚದಲ್ಲಿ ಮಧ್ಯಾಹ್ನದ ಬಿಸಿ ಊಟ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ-ಬಾಣಂತಿಯರಿಗೆ ಮೂರು ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ₹5,000 ಸಹಾಯ ಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 222 ಅಪೌಷ್ಟಿಕ ಮಕ್ಕಳಿದ್ದು, ವಾರ್ಷಿಕವಾಗಿ ತಲಾ ₹2,000 ವೆಚ್ಚದಲ್ಲಿ ಔಷಧೋಪಚಾರ ವ್ಯವಸ್ಥೆ ಮಾಡಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಅಂಗನವಾಡಿಗಳ ನೋಟ
ಒಟ್ಟು ಅಂಗನವಾಡಿಗಳ ಸಂಖ್ಯೆ | 1,825 |
ಸ್ವಂತ ಕಟ್ಟಡಗಳು | 1,555 |
ಬಾಡಿಗೆ ಕಟ್ಟಡಗಳು | 70 |
6 ತಿಂಗಳಿಂದ 3 ವರ್ಷದ ಮಕ್ಕಳು | 28,014 |
3 ವರ್ಷದಿಂದ 6 ವರ್ಷದ ಮಕ್ಕಳು | 23,073 |
ಸೌಲಭ್ಯ ಪಡೆಯುತ್ತಿರುವ ಗರ್ಭಿಣಿಯರು | 5,487 |
ಸೌಲಭ್ಯ ಪಡೆಯುತ್ತಿರುವ ಬಾಣಂತಿಯರು | 5,479 |
ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು | 1,769 |
ಕಾರ್ಯನಿರ್ವಹಿಸುತ್ತಿರುವ ಸಹಾಯಕಿ ಕಾರ್ಯಕರ್ತೆಯರು | 1,567 |
ದಾಖಲಾದ ವಲಸೆ ಕಾರ್ಮಿಕರ ಮಕ್ಕಳು | 1,868 |