ಚಿಕ್ಕಮಗಳೂರು : ಚಿನ್ನದ ವ್ಯಾಪಾರಿಯನ್ನು ಬೆದರಿಸಿ 10 ಲಕ್ಷ ರೂಗೆ ಬೇಡಿಕೆ ಇಟ್ಟು, 5 ಲಕ್ಷ ರೂಪಾಯಿ ವಸೂಲಿ ಮಾಡಿರುವ ಆರೋಪ ಪೊಲೀಸರ ವಿರುದ್ಧ ಕೇಳಿಬಂದಿದೆ. ಈ ಕುರಿತು ಜಿಲ್ಲೆಯ ಅಜ್ಜಂಪುರ ಠಾಣಾಧಿಕಾರಿ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದಾವಣಗೆರೆಯ ಚಿನ್ನದ ವರ್ತಕ ಭಗವಾನ್ ಎಂಬವರು ಈ ದೂರು ದಾಖಲಿಸಿದ್ದರು. ಅಜ್ಜಂಪುರ ಠಾಣಾಧಿಕಾರಿ ಲಿಂಗರಾಜು ಪ್ರಮುಖ ಆರೋಪಿಯಾಗಿದ್ದು, ಸಖರಾಯ ಪಟ್ಟಣದ ಧನಪಾಲ ನಾಯಕ್, ಕುದುರೆ ಮುಖದ ಓಂಕಾರ ಮೂರ್ತಿ, ಲಿಂಗದಹಳ್ಳಿಯ ಶರತ್ ರಾಜ್ ಎಂಬುವವರು ಇತರ ಆರೋಪಿಗಳಾಗಿದ್ದಾರೆ.
ಭಗವಾನ್ ಅವರ ಪುತ್ರ ರೋಹಿತ್ ಸುಮಾರು 2 ಕೆಜಿ ಚಿನ್ನದ ಆಭರಣಗಳನ್ನು ಬೇಲೂರಿನ ವರ್ತಕರಿಗೆ ನೀಡಲು ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಅಜ್ಜಂಪುರದ ಬುಕ್ಕಾಂಬುದಿ ಗೇಟಿನ ಬಳಿ ಇಬ್ಬರು ಪೊಲೀಸರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ನೇರವಾಗಿ ಕಾರಿನ ಒಳಗೆ ಬಂದು ಕುಳಿತ ಪೊಲೀಸ್ ಸಿಬ್ಬಂದಿ, ಸ್ವಲ್ಪ ದೂರದಲ್ಲಿದ್ದ ಠಾಣಾಧಿಕಾರಿ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ರೋಹಿತ್ ಅವರನ್ನು ಬಲವಂತವಾಗಿ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ ಹಣ ಕೊಡದಿದ್ದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುವ ಆರೋಪದ ಮೇಲೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇನ್ನು ವ್ಯಾಪಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಿದರೂ ಬಿಡದೆ ಪೊಲೀಸರು ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅಂತಿಮವಾಗಿ 5 ಲಕ್ಷ ರೂ.ಗಳನ್ನು ಪೊಲೀಸರಿಗೆ ಪಾವತಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರೋಹಿತ್ ಅವರು ಅಜ್ಜಂಪುರದಲ್ಲಿರುವ ವರ್ತಕರೊಬ್ಬರಿಂದ ಹಣವನ್ನು ಪಡೆದು ಪೊಲೀಸರಿಗೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.
ಇದನ್ನೂ ಓದಿ : ಹುಬ್ಬಳ್ಳಿ: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ